×
Ad

ಮುಖ್ಯಮಂತ್ರಿಗೆ ‘ದುಬಾರಿ’ಯಾದ ಕೈಗಡಿಯಾರ

Update: 2016-02-12 23:24 IST

ಬೆಂಗಳೂರು, ಫೆ. 12: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಪ್ಪತ್ತು ಲಕ್ಷ ರೂಪಾಯಿ ಬೆಲೆ ಬಾಳುವ ವಾಚು ಉಡುಗೊರೆಯಾಗಿ ಬಂದಿರುವುದನ್ನು ಅವರು ಸರಕಾರದ ವಶಕ್ಕೆ ನೀಡಬೇಕೆಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ. ಸಿದ್ದರಾಮಯ್ಯ ಎನ್ನುವ ಕಾರಣಕ್ಕೆ ಇದು ಉಡುಗೊರೆಯಾಗಿ ಬಂದಿಲ್ಲ. ಬದಲಿಗೆ ಮುಖ್ಯಮಂತ್ರಿ ಎನ್ನುವ ಕಾರಣಕ್ಕೆ ದೊರೆತಿದೆ. ಹೀಗಾಗಿ ಅವರು ಸರಕಾರದ ವಶಕ್ಕೆ ನೀಡುವುದು ಸೂಕ್ತ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಈ ಹಿಂದೆ ನಿಜಲಿಂಗಪ್ಪ ಅವರಿಗೆ ಇದೇ ರೀತಿಯ ದುಬಾರಿ ವಾಚ್ ಉಡುಗೊರೆಯಾಗಿ ಬಂದಿತ್ತು. ಅವರು ಇದನ್ನು ಮುಖ್ಯಮಂತ್ರಿ ಕಚೇರಿಯಲ್ಲೇ ಇರಿಸಿದ್ದರು. ಅನಂತರ ಮುಖ್ಯಮಂತ್ರಿಯಾದವರು ಈ ವಾಚ್‌ನ್ನು ಕಟ್ಟುತ್ತಿದ್ದರು. ರಾಮಕೃಷ್ಣ ಹೆಗಡೆ ಕಾಲದವರೆಗೆ ಇದು ಮುಂದುವರಿದಿತ್ತು. ಅನಂತರದ ದಿನಗಳಲ್ಲಿ ಈ ವಾಚ್ ನಾಪತ್ತೆಯಾಗಿತ್ತು ಎಂದು ಸಚಿವಾಲಯದ ಮೂಲಗಳು ಹೇಳಿವೆ. ಅದೇ ರೀತಿ ಇದುವರೆಗೆ ಮುಖ್ಯಮಂತ್ರಿ ಗಳಾದವರಿಗೆ ದಕ್ಕಿದ ಉಡುಗೊರೆಗಳ ಕುರಿತೂ ರಾಜಕೀಯ ವಲಯಗಳಲ್ಲಿ ಚರ್ಚೆ ಆರಂಭವಾಗಿದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರಿಗೆ ಉಡುಗೊರೆಗಳು ಸಿಗುವುದು ಹೊಸತೇನಲ್ಲವಾದರೂ ಇತ್ತೀಚಿನ ದಿನಗಳಲ್ಲಿ ಆ ಉಡುಗೊರೆಗಳನ್ನು ಸರಕಾರದ ವಶಕ್ಕೆ ಒಪ್ಪಿಸಿ ಹೋಗುವವರು ಕಡಿಮೆಯಾಗಿದೆ. ಹಿಂದೆ ಮುಖ್ಯಮಂತ್ರಿಗಳಾದವರಿಗೆ ಜನ ಪ್ರೀತಿಯಿಂದ ಬೆಳ್ಳಿಯ ಗದೆ, ಕತ್ತಿ, ಕಿರೀಟ ಸೇರಿದಂತೆ ಹಲವು ಬಗೆಯ ಉಡುಗೊರೆಗಳನ್ನು ನೀಡುತ್ತಿದ್ದ ಕುರಿತು ಇವತ್ತೂ ದಾಖಲೆಯಾಗಿರುವುದು ರಾಜ್ಯ ಸಚಿವ ಸಂಪುಟ ಸಭೆ ನಡೆಯುವ ಜಾಗ. ಸಚಿವ ಸಂಪುಟ ಸಭೆ ನಡೆಯುವ ಜಾಗದಲ್ಲಿ ಬೆಳ್ಳಿ ಗದೆಯಿಂದ ಹಿಡಿದು ಹಲವು ಅಮೂಲ್ಯ ವಸ್ತುಗಳಿವೆ. ಇವೆಲ್ಲ ಆಯಾ ಕಾಲದಲ್ಲಿ ಮುಖ್ಯಮಂತ್ರಿಯಾದವರಿಗೆ ನೀಡಿದ್ದು, ಮತ್ತವರು ಈ ವಸ್ತುಗಳನ್ನು ಸರಕಾರದ ವಶಕ್ಕೆ ಒಪ್ಪಿಸಿಬಿಡುತ್ತಿದ್ದರು.
ಹೀಗೆ ಮುಖ್ಯಮಂತ್ರಿಗಳಾದವರು ತಾವು ಪಡೆದ ಕೊಡುಗೆಗಳನ್ನು ಹಲವು ಸಂದರ್ಭಗಳಲ್ಲಿ ಸರಕಾರಕ್ಕೆ ಸಲ್ಲಿಸಿದ ಪರಿಣಾಮವಾಗಿ ಇವತ್ತಿಗೂ ರಾಜ್ಯ ಸಚಿವ ಸಂಪುಟ ಸಭೆ ನಡೆಯುವ ಜಾಗದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಉಡುಗೊರೆಗಳು ಈಗಲೂ ರಾರಾಜಿಸುತ್ತಿವೆ.
ಕೇವಲ ರಾಜ್ಯದವರಷ್ಟೇ ಅಲ್ಲ, ಪರರಾಜ್ಯದವರು, ವಿದೇಶಿಯರು ನೀಡಿದ ಉಡುಗೊರೆಗಳೂ ಸಚಿವ ಸಂಪುಟ ಸಭೆ ನಡೆಯುವ ಹಾಲ್‌ನಲ್ಲಿವೆ. ಆದರೆ ಇತ್ತೀಚಿನ ದಶಕಗಳಲ್ಲಿ ಮುಖ್ಯಮಂತ್ರಿಗಳಾದವರು ತಮಗೆ ದಕ್ಕಿದ ಉಡುಗೊರೆಗಳೇನು ಅನ್ನುವುದನ್ನು ಸರಕಾರಕ್ಕೆ ತಿಳಿಸಿದ ಉದಾಹರಣೆಯೂ ಕಡಿಮೆ. ಮತ್ತು ಇಂತಹ ಉಡುಗೊರೆಗಳನ್ನು ಸರಕಾರದ ವಶಕ್ಕೆ ಒಪ್ಪಿಸಿದ್ದೂ ಕಡಿಮೆ.
ಕೇವಲ ತಮಗೆ ಉಪಕಾರ ಮಾಡಿದರು ಎಂಬ ಕಾರಣಕ್ಕಾಗಿಯೇ ಮುಖ್ಯಮಂತ್ರಿಗಳಾದವರಿಗೆ ಉಡುಗೊರೆಗಳು ದಕ್ಕುವುದಿಲ್ಲ. ಬದಲಿಗೆ ಪ್ರೀತಿ ಪಾತ್ರರು, ಅಭಿಮಾನಿಗಳು ಕೂಡ ತಮಗೆ ಬೇಕೆನ್ನಿಸಿದ ಉಡುಗೊರೆ ನೀಡುತ್ತಾರೆ.
ಇಂತಹ ಉಡುಗೊರೆಗಳನ್ನು ಬಹುಪಾಲು ನೀಡುವವರು ಪ್ರೀತಿ, ಪಾತ್ರರು. ಅಭಿಮಾನಿಗಳು. ಸಾರ್, ಇಂತಹ ದೇಶಕ್ಕೆ ಹೋಗಿದ್ದೆ. ಬರುವಾಗ ಇಂತಹ ವಾಚು ತಂದೆ ಅಂತಲೋ? ಇನ್ನೇನನ್ನೋ ನೀಡುವುದು ಮಾಮೂಲು.
ಹೀಗೆ ತಮಗೆ ಬಂದ ಉಡುಗೊರೆಗಳ ವೌಲ್ಯವನ್ನು ಅರಿತುಕೊಳ್ಳುವ ಮನಸ್ಸಿದ್ದಿದ್ದರೆ ಸಿಎಂ ಸಿದ್ದರಾಮಯ್ಯ ಅದನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿರಲಿಲ್ಲ. ಆದರೆ ವಾಚಿನ ವೌಲ್ಯ ಎಷ್ಟು ಎಂಬುದು ಗೊತ್ತಾಗದೆ ಇರುವ ಕಾರಣದಿಂದ ಅದನ್ನು ಬಹಿರಂಗವಾಗಿ ಪ್ರದರ್ಶಿಸಿದರು.
ಈ ಹಿಂದೆ ಕೆಲ ಮುಖ್ಯಮಂತ್ರಿಗಳು ಇಂತಹ ಬೆಲೆ ಬಾಳುವ ಉಡುಗೊರೆಗಳನ್ನು ಪಡೆದರೂ ಅದನ್ನು ಬಹಿರಂಗವಾಗಿ ಪ್ರದರ್ಶಿಸಲಿಲ್ಲ. ಹೀಗಾಗಿ ತಮ್ಮ ಮೇಲೆ ಯಾವುದೇ ಆರೋಪ ಬರದಂತೆ ನೋಡಿಕೊಳ್ಳುವಲ್ಲಿ ಅವರು ಸಫಲರಾದರು.
ಆ ದೃಷ್ಟಿಯಿಂದ ಸಿದ್ದರಾಮಯ್ಯ ಅವರು ಉದ್ದೇಶಪೂರ್ವಕವಾಗಿ ತಪ್ಪು ಮಾಡಿದ್ದಾರೆ ಎಂದು ಹೇಳಲಾಗುವುದಿಲ್ಲ. ಆದರೆ ಒಂದಂತೂ ನಿಜ. ಆ ವಾಚನ್ನು ಅವರು ಉಡುಗೊರೆಯಾಗಿ ಪಡೆದಿದ್ದರಿಂದ ಅದನ್ನು ಸರಕಾರದ ವಶಕ್ಕೆ ಕೊಟ್ಟು ಬಿಡುವುದು ಒಳ್ಳೆಯದು ಎಂಬ ವಾದ ಸಾರ್ವಜನಿಕ ವಲಯಗಳಿಂದ ಕೇಳಿ ಬರುತ್ತಿದೆ.
ಇಲ್ಲವಾದರೆ ನಿರ್ದಿಷ್ಟ ಕೆಲಸ ಮಾಡಿಕೊಡುವ ಸಲುವಾಗಿ ಇಂತಹ ಬೆಲೆ ಬಾಳುವ ವಾಚ್ ಅನ್ನು ಅವರ ಆತ್ಮೀಯರು ನೀಡಿದರು ಎಂಬ ಮಾತು ಸಹಜವಾಗಿಯೇ ಕೇಳುತ್ತದೆ. ಹೀಗಾಗಿ ಸಿದ್ದರಾಮಯ್ಯ ತಮ್ಮ ವಾಚ್ ಅನ್ನು ವಿವಾದದ ಮೂಲವಾಗಿಸದೆ ಸರಕಾರದ ವಶಕ್ಕೆ ನೀಡಿದರೆ ಸಹಜವಾಗಿಯೇ ಅದು ಸಚಿವ ಸಂಪುಟ ನಡೆಯುವ ಹಾಲ್‌ನಲ್ಲಿರುವ ಕಪಾಟನ್ನು ಅಲಂಕರಿಸುತ್ತದೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಕೂಡ ಈ ಬೆಲೆ ಬಾಳುವ ವಾಚ್ ವಿವಾದದಿಂದ ಹೊರ ಬಂದಂತಾಗುತ್ತದೆ.


ತಮಗೆ ಬಂದಿರುವ ಉಡುಗೊರೆಯ ವಾಚ್‌ನ್ನು ಬಹಿರಂಗ ಹರಾಜು ಹಾಕಿ, ಅದರಿಂದ ಬರುವ ಹಣವನ್ನು ಬಡವರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬೇಕು.        ಬಿ.ಜನಾರ್ದನ ಪೂಜಾರಿ, ಹಿರಿಯ ಕಾಂಗ್ರೆಸ್ ಮುಖಂಡ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News