ಕೃಷಿ ಜಮೀನು ಖರೀದಿಗೆ ಆದಾಯ ಮಿತಿ ಹೆಚ್ಚಳ: ಹೈಕೋರ್ಟ್ ತೀರ್ಪಿಗೆ ಎಸ್.ಆರ್.ಹಿರೇಮಠ್ ಆಕ್ಷೇಪ
ಬೆಂಗಳೂರು, ಫೆ. 12: ಕಳೆದ ಜನವರಿಯಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿಗೊಳಿಸಿ, ಕೃಷಿ ಜಮೀನನ್ನು ಖರೀದಿ ಮಾಡಲು ಇದ್ದ ಆದಾಯ ಮಿತಿಯನ್ನು ಹೆಚ್ಚಳಗೊಳಿಸಿರುವ ತೀರ್ಪುನಿಂದಾಗಿ ರೈತರಿಗೆ ಘೋರ ಅನ್ಯಾಯವಾಗಲಿದೆ ಎಂದು ಜನಸಂಗ್ರಾಮ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಹೇಳಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ. ಆನಂದ್ ಬೈರಾರೆಡ್ಡಿಯವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಇದೇ ಜ.5ರಂದು 1974ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಎರಡು ಲಕ್ಷಕಿದ್ದ ಆದಾಯ ಮಿತಿಯನ್ನು 25 ಲಕ್ಷ ರೂ. ಹೆಚ್ಚಿಸಲಾಗಿದೆ. ಅಲ್ಲದೆ ಈ ತೀರ್ಪು 1974ರಿಂದ ಮಾರಾಟವಾಗಿರುವ ಕೃಷಿ ಭೂಮಿಗೂ ಅನ್ವಯಿಸಲಿದೆ ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ತೀರ್ಪಿನಿಂದಾಗಿ ರೈತರಿಗೆ ಅನ್ಯಾಯವಾಗುವುದರ ಜತೆಗೆ 1974ರಿಂದ ಅಕ್ರಮ ಮಾರಾಟವಾಗಿರುವ ಕೃಷಿ ಭೂಮಿ ಸಕ್ರಮವಾಗಲಿವೆ. ಈ ತೀರ್ಪು ರೈತರಿಗಿಂತ ಭೂಮಿ ನುಂಗಣ್ಣರಿಗೆ ಹೆಚ್ಚು ಲಾಭವಾಗಲಿದೆ ಎಂದು ತಿಳಿಸಿದ ಅವರು, 1974ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ಈ ತೀರ್ಪು ವಿರುದ್ಧವಾಗಿರುವುದರಿಂದ ತಕ್ಷಣವೇ ರಾಜ್ಯ ಸರಕಾರ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕೆಂದು ಮನವಿ ಮಾಡಿದರು.
ಆರೋಪ: ಮಾಜಿ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್‌ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜ್ ಅವರ ಮೇಲೆ ಒತ್ತಡ ಹೇರಿ ದೇವನಹಳ್ಳಿ ಬಳಿ ಪ್ರೆಸ್ಟೀಜ್ ಕಂಪನಿಗೆ 5 ಎಕರೆ ಜಮೀನನ್ನು ಕಾನೂನುಬಾಹಿರವಾಗಿ ಕೊಡಿಸಿದ್ದಾರೆ ಎಂದು ಎಸ್.ಆರ್.ಹಿರೇಮಠ್ ಆರೋಪಿಸಿದ್ದಾರೆ.
ಕೋಟ್ಯಂತರ ರೂ. ಬೆಲೆ ಬಾಳುವ ಈ ಜಮೀನನ್ನು ಪ್ರೆಸ್ಟೀಜ್ ಕಂಪೆನಿ ಕಾನೂನುಬಾಹಿರವಾಗಿ ಪಡೆದಿದೆ. ಜಮೀನು ನೀಡಿರುವ ಬಸವರಾಜ್ ವಿರುದ್ಧ ಶಿಸ್ತು ಕ್ರಮ ಜರಗಿಸಿ ಸೇವೆಯಿಂದ ಅಮಾನತುಗೊಳಿಸಬೇಕು. ಕೂಡಲೇ ಎಸ್‌ಐಟಿ ಅಧಿಕಾರಿಗಳು ಅವರ ವಿರುದ್ಧ ಐಪಿಸಿ ಸೆಕ್ಷನ್ 107 ಮತ್ತು 108ರ ಪ್ರಕಾರ ಎ್ಐಆರ್ ದಾಖಲಿಸಿ ಬಂಧಿಸಬೇಕೆಂದು ಅವರು ಒತ್ತಾಯಿಸಿದರು.
ನ್ಯಾಯಾಲಯಕ್ಕೆ ಮೊರೆ: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದ್ದ ಭ್ರಷ್ಟಾಚಾರದ ಪ್ರಮುಖ ಆರೋಪಿ ವೈ. ಭಾಸ್ಕರ್‌ರಾವ್ ಅವರ ವಿರುದ್ಧ ಎಸ್‌ಐಟಿ ಅಧಿಕಾರಿಗಳು ತಕ್ಷಣವೇ ಎ್ಐಆರ್ ದಾಖಲಿಸಿ ಅವರನ್ನು ಬಂಧಿಸಬೇಕು. ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಎ್ಐಆರ್ ದಾಖಲಿಸಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದಕ್ಕೆ ಕಾರಣ ಏನು? ಅವರನ್ನು ಕೂಡಲೇ ಬಂಧಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ, ಸದಸ್ಯ ಸಿ.ಎನ್.ದೀಪಕ್ ಉಪಸ್ಥಿತರಿದ್ದರು.