×
Ad

ಸಿಎಂ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ: ಎಚ್‌ಡಿಕೆ ಭವಿಷ್ಯ

Update: 2016-02-12 23:26 IST

ಬೆಂಗಳೂರು, ಫೆ. 12: ದುಬಾರಿ ಮೊತ್ತದ ಗಡಿಯಾರ ವಿವಾದದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ.
ಶುಕ್ರವಾರ ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದುಬಾರಿ ಮೊತ್ತದ ಗಡಿಯಾರ ಎಲ್ಲಿಂದ ಬಂತು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಸೂಕ್ತ ತನಿಖೆಯಾದರೆ ಅವರು ಮನೆಗೆ ಹೋಗುವುದು ಖಚಿತ ಎಂದರು.
ತಾನು ಸಿಎಂ ಸಿದ್ದರಾಮಯ್ಯನವರ ವಿರುದ್ಧ ಸುಮ್ಮನೆ ಟೀಕೆ ಮಾಡಿದ್ದೆ. ಆದರೆ, ದುಬಾರಿ ಕೈ ಗಡಿಯಾರ ಸ್ನೇಹಿತರು ಕೊಡುಗೆ ನೀಡಿದ್ದಾರೆಂದು ಹೇಳುವ ಮೂಲಕ ಖುದ್ದು ಸಿದ್ದರಾಮಯ್ಯನವರೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದನ್ನು ತಾನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್‌ಡಿಕೆ ಇದೇ ವೇಳೆ ಗುಡುಗಿದರು.
ರಾಜ್ಯಕ್ಕೆ ಅನ್ಯಾಯ: ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರಕಾರದಿಂದ ಬರಬೇಕಾದ ಸುಮಾರು 4 ಸಾವಿರ ಕೋಟಿ ರೂ.ಗಳು ವಿವಿಧ ಕಾರಣಗಳಿಗಾಗಿ ಬಂದಿಲ್ಲ. ಹೀಗಾಗಿ ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗಿದೆ ಎಂದ ಕುಮಾರಸ್ವಾಮಿ, ದೇವದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ್ ಗೆಲುವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News