108 ಆ್ಯಂಬುಲೆನ್ಸ್ ಸಿಬ್ಬಂದಿಯಿಂದ ಮತದಾನ ಬಹಿಷ್ಕಾರ

Update: 2016-02-13 18:26 GMT

ಬೆಂಗಳೂರು, ಫೆ.13: ರಾಜ್ಯದ 108 ಆ್ಯಂಬುಲೆನ್ಸ್‌ನ ಸಿಬ್ಬಂದಿ ತಮ್ಮ ಪ್ರಗತಿಪರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಜಿಲ್ಲಾ-ತಾಲೂಕು ಪಂಚಾಯತ್ ಹಾಗೂ ಮೂರು ವಿಧಾನಸಭಾಕ್ಷೇತ್ರದ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿದ್ದಾರೆ.

ರಾಜ್ಯದಲ್ಲಿ ಎಂಟು ವರ್ಷಗಳಿಂದ ಅಂದಾಜು 717 ಆ್ಯಂಬುಲೆನ್ಸ್ ವಾಹನಗಳಲ್ಲಿ 3,500 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಜ.25ರಿಂದ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ, ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಂದು ನಡೆದ ಜಿಲ್ಲಾ-ತಾಲೂಕು ಪಂಚಾಯತ್‌ನ ಮೊದಲ ಹಂತದ ಚುನಾವಣೆಯಲ್ಲಿ ಹಾಗೂ ಮೂರು ವಿಧಾನಸಭಾಕ್ಷೇತ್ರಗಳ ಉಪಚುನಾವಣೆಯಲ್ಲಿ ಮತ ಚಲಾವಣೆಯನ್ನು ಆ್ಯಂಬುಲೆನ್ಸ್ ಸಿಬ್ಬಂದಿ ಬಹಿಷ್ಕರಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪ್ರತಿಭಟನಾಕಾರರು, ಶನಿವಾರದಿಂದ ಪತ್ರ ಚಳವಳಿ ಆರಂಭಿಸಲಾಗಿದ್ದು, ‘ನ್ಯಾಯ ಕೊಡಿಸಿ ಇಲ್ಲವೇ ಇಚ್ಛಾ ಮರಣಕ್ಕೆ ಅನುಮತಿ ಕೊಡಿ’ ಎಂಬ ಒಕ್ಕಣೆಯೊಂದಿಗೆ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಯವರಿಗೆ ಪತ್ರಗಳನ್ನು ಬರೆದಿರುವ 108 ಆ್ಯಂಬುಲೆನ್ಸ್ ನೌಕರರು, ಅವರ ವಿಳಾಸಕ್ಕೆ ಪೋಸ್ಟ್ ಮಾಡಲು ನಿರ್ಧರಿಸಿದ್ದಾರೆ.

 ಈಗಾಗಲೇ 1,500ಕ್ಕೂ ಹೆಚ್ಚು ಪತ್ರಗಳನ್ನು ಬರೆಯಲಾಗಿದ್ದು, ಇನ್ನಷ್ಟು ಪತ್ರಗಳನ್ನು ಬರೆ ಯಲಾಗುವುದು. ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಯವರಿಗಷ್ಟೇ ಅಲ್ಲದೆ, ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೂ ಪತ್ರಗಳನ್ನು ರವಾನಿಸಲಾಗುವುದು ಎಂದರು.

ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರವಾಗಲಿ, ಆರೋಗ್ಯ ಸಚಿವರಾಗಲಿ ಅಥವಾ ಜಿವಿಕೆ ಸಂಸ್ಥೆಯಾಗಲಿ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಹಾಗಾಗಿ ತಾವು ಮಧ್ಯಪ್ರವೇಶಿಸಿ ನಮಗೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಇಚ್ಛಾ ಮರಣಕ್ಕಾದರೂ ಅನುಮತಿ ಕೊಡಿ ಎಂದು ಪತ್ರದಲ್ಲಿ ಬರೆಯಲಾಗಿದೆ. ಜೊತೆಗೆ ಸೋಮವಾರ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಪತ್ರ ಕೂಡ ಸಲ್ಲಿಸಲಾಗುವುದು ಎಂದು 108 ಆ್ಯಂಬುಲೆನ್ಸ್ ನೌಕರರ ಸಂಘದ ಉಪಾಧ್ಯಕ್ಷ ಶ್ರೀಶೈಲ್ ಹೂಗಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News