ಎಬಿವಿಪಿಯ ಮೇಲೆ ಕೂಡಲೇ ಕ್ರಮ ಕೈಗೊಳ್ಳಿ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಮೇಲಲ್ಲ: ಕ್ಯಾಂಪಸ್ ಫ್ರಂಟ್

Update: 2016-02-14 09:27 GMT

ನವದೆಹಲಿ: ಜೆ ಎನ್ ಯೂನಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿದ ಎಬಿವಿಪಿ ಪ್ರತಿಭಟನಾಕಾರರ ಮೇಲೆ ಶೀಘ್ರ ಕ್ರಮ ಕೈಗೊಳ್ಳುವಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯಕಾರಿ ಒತ್ತಾಯಿಸಿದೆ. ಇದು ಕ್ಯಾಂಪಸ್ ನಲ್ಲಿರುವ ವಿದ್ಯಾರ್ಥಿ ಚಳವಳಿಯನ್ನು ದಮನಿಸಲು ಎಬಿವಿಪಿ ಮತ್ತು ಅದರ ಮಾತೃ ಸಂಘಟನೆಗಳು ನಡೆಸಿದ ನೀಚ ಕುತಂತ್ರವಾಗಿತ್ತು ಎಂಬುವುದು ಬಯಲಾಗಿದೆ. ಎಬಿವಿಪಿಯು ದೇಶಾದ್ಯಂತ ವಿಧ್ವಂಸಕ ಹಾಗೂ ಗೂಂಡಾಗಿರಿಯ ಸುಧೀರ್ಘ ಇತಿಹಾಸವನ್ನು ಹೊಂದಿದ್ದು ದೇಶಪ್ರೇಮದ ಪಾಠವನ್ನು ಕಲಿಸುವ ಯಾವುದೇ ನೈತಿಕತೆಯನ್ನು ಅದು ಹೊಂದಿಲ್ಲ.  ಅದು ಮಾತ್ರವಲ್ಲದೆ ಯಾವುದೇ ವ್ಯಕ್ತಿಯ ದೇಶಭಕ್ತಿಯನ್ನು ಪ್ರಶ್ನಿಸುವ ಐತಿಹಾಸಿಕ ಮತ್ತು ನೈತಿಕ ಹಕ್ಕೂ ಕೂಡ ಎಬಿವಿಪಿಗೆ ಇಲ್ಲ. ಅಧಿಕಾರಿಗೆ ರಾಷ್ಟ್ರದ್ರೋಹದ ಅಡಿಯಲ್ಲಿ ಎಬಿವಿಪಿಯ ಗೂಂಡಾಗಳನ್ನು ಬಂಧಿಸಲು ಸಾಧ್ಯವಿದೆಯೇ?

ಜೆಎನ್ ಯು ನಲ್ಲಿನ ವಿದ್ಯಾರ್ಥಿ ಹೋರಾಟಗಾರರ ಬೇಕಾಬಿಟ್ಟಿ ಬಂಧನ ಹಾಗೂ ಅವರ ಮೇಲೆ ಗಂಭೀರ ಪ್ರಕರಣಗಳನ್ನು ದಾಖಲಿಸಿರುವ ಕ್ರಮವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವು ತೀವ್ರವಾಗಿ ಖಂಡಿಸುತ್ತದೆ. ಜೆಎನ್ ಯು ಎಸ್ ಯು ಅಧ್ಯಕ್ಷ ಕನೈಯ್ಯಾ ಕುಮಾರ್ ಮೇಲೆ ಕೈಗೊಂಡ ಪೋಲೀಸ್ ಕ್ರಮದಲ್ಲಿ ಯಾವುದೇ ಸಮರ್ಥನೀಯ ಅಂಶ ಕಂಡುಬರುತ್ತಿಲ್ಲ. ಅವರು ಮತ್ತು ಅವರ ಪದಾಧಿಕಾರಿಗಳು ಪ್ರಸ್ತುತ ಘಟನೆಯ ಕುರಿತು ಸ್ಪಷ್ಟಪಡಿಸುತ್ತಾ, ಪ್ರತಿಭಟನೆಯನ್ನು ನಾವು ಹಮ್ಮಿಕೊಂಡಿಲ್ಲ ಎಂದಿದ್ದಾರೆ. ಮಾತ್ರವಲ್ಲದೆ ಪ್ರತಿಭಟನೆಯ ಸಂದರ್ಭದಲ್ಲಿ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿರುವ ಅವರ ಮೇಲಿನ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಜೆಎನ್ ಯೂನಲ್ಲಿ ನಡೆದ ಪೋಲೀಸ್ ಭಯೋತ್ಪಾದನೆ ಹಾಗೂ ಜೆಎನ್ ಯೂ ಯೂನಿಯನ್ ಅಧ್ಯಕ್ಷರ ಬಂಧನ ಮತ್ತು ಅವರ ಮೇಲೆ ಹೊರಿಸಲಾದ ದೇಶದ್ರೋಹದ ಆರೋಪವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವು ತೀವ್ರವಾಗಿ ಖಂಡಿಸುತ್ತದೆ. ಮಾತ್ರವಲ್ಲದೆ ಇದು ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಆರೆಸ್ಸೆಸ್ ಹಾಗೂ ಬಿಜೆಪಿಯ ಸಮಾಜೋ-ಆರ್ಥಿಕ ರಂಗದ ನೀತಿಯ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಜೆಎನ್ ಯುವನ್ನು ಗುರಿಯಾಗಿಸಲಾಗುತ್ತಿದೆ. ಮಾತ್ರವಲ್ಲದೆ ಯುಜಿಸಿ ಚಳವಳಿ ಮತ್ತು ರೋಹಿತ್ ವೇಮುಲಾ ಪ್ರಕರಣಗಳ ವಿಚಾರದಲ್ಲಿ ಜೆಎನ್ ಯು ಮುಂಚೂಣಿ ಪಾತ್ರ ವಹಿಸಿರುವ ಕಾರಣದಿಂದಲೂ ಜೆಎನ್ ಯೂ ಗುರಿಯಾಗಿಸಲ್ಪಟ್ಟಿದೆ. ಮುಖ್ಯವಾಗಿ ಜಂದೇನ್ ವಾಲಾದಲ್ಲಿ ನಡೆದ ಪ್ರತಿಭಟನೆಯು ಗೃಹ ಸಚಿವರ ಕಣ್ಣು ಕೆಂಪಾಗಿಸಲು ಕಾರಣವೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಭಾವಿಸುತ್ತದೆ.

ಪ್ರಸ್ತುತ ಘಟನೆಯಲ್ಲಿ ಕನೈಯ್ಯಾ ಕುಮಾರ್ ಪಾತ್ರವಿಲ್ಲದಿದ್ದರೂ ಜೆಎನ್ ಯು ವಿದ್ಯಾರ್ಥಿ ಮಂಡಲದ ಅಧ್ಯಕ್ಷನಾಗಿದ್ದುಕೊಂಡು ಘಟನೆಯನ್ನು ತಿಳಿಯಾಗಿಸಲು ಮತ್ತು ಭಿನ್ನ ಅಭಿಪ್ರಾಯದ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ ಜೆಎನ್ ಯು ಆಡಳಿತ ವರ್ಗದ ಕ್ರಮವನ್ನು ವಿರೋಧಿಸಿದ್ದನ್ನೇ ಅಪರಾಧವಾಗಿ ಇಂದು ಕಾಣಲಾಗುತ್ತಿದೆ.

ಈ ಘಟನೆಗೆ ಸಂಬಂಧಿಸಿದಂತೆ ಗೃಹ ಕಛೇರಿಯು ಅತಿಯಾಗಿ, ಅನಗತ್ಯವಾಗಿ, ಅಸಮಾನವಾಗಿ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿರುವುದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವು ತೀವ್ರವಾಗಿ ಖಂಡಿಸುತ್ತದೆ. ಕ್ಯಾಂಪಸ್ ಒಳಗೆ ನುಗ್ಗಿಕೊಂಡು ದಾಳಿ ನಡೆಸಿದ ಪೋಲಿಸ್ ಕ್ರಮವನ್ನು ಯಾವ ರೀತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲ. ಇಂತಹ ಅನಧಿಕೃತ ಬಾಹ್ಯ ಮಧ್ಯ ಪ್ರವೇಶಗಳಿಂದಾಗಿ ವಿಶ್ವ ವಿದ್ಯಾಲಯದ ಆಡಳಿತ ಯಂತ್ರವು ಸರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಪುರುಷ ಪೋಲಿಸ್ ಅಧಿಕಾರಿಗಳು ಅರಿವಿದ್ದುಕೊಂಡೇ ವಿದ್ಯಾರ್ಥಿನಿ ನಿಲಯಗಳ ಮೇಲೆ ದಾಳಿ ನಡೆಸಿರುತ್ತಾರೆ. ಇದು ಅತ್ಯಂತ ಹೇಯ ಕೃತ್ಯವಾಗಿದೆ.

ದೆಹಲಿಯ ಆರೆಸ್ಸೆಸ್ ಕಛೇರಿ ಪ್ರತಿಭಟನೆಯ ಸಂದರ್ಭದಲ್ಲಿ ಕೇಸರಿ ಗೂಂಡಾಗಳು ಪೋಲೀಸರೊಂದಿಗೆ ಸೇರಿಕೊಂಡು ವಿದ್ಯಾರ್ಥಿಗಳ ಮೇಲೆ ನಡೆಸಿದ ಧಾಳಿಯು ಪೋಲಿಸರೊಂದಿಗಿನ ಅವರ ಸಂಬಂಧವು ಬಹಳ ಗಟ್ಟಿಯಾಗಿದೆ ಎನ್ನುವುದನ್ನು ಸಾಬೀತುಪಡಿಸುತ್ತದೆ.

ಇದೇ ಸಂದರ್ಭದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳ ನಡೆ ಕೂಡ ಕಳವಳಕಾರಿಯಾಗಿದೆ. ಅದು ಎಬಿವಿಪಿ ಮತ್ತು ಅದರ ರಾಜಕೀಯ ಮುಖ್ಯರು ನೀಡುವ ಹೇಳಿಕೆಗಳನ್ನು ಆವರ್ತಿಸಿ ಪ್ರಸಾರ ಮಾಡುತ್ತಿದ್ದಾರಲ್ಲದೆ ನೈಜತೆಯನ್ನು ಶೋಧಿಸುವ ಗೋಜಿಗೆ ಹೋಗಿಲ್ಲ.

ಮಾತ್ರವಲ್ಲದೆ ಅದು ದೇಶದ ವಿವಿಧತೆಯ ಕುರಿತು ಅಸಡ್ಡೆಯನ್ನು ಹೊಂದಿದ್ದು, ದೇಶದ ಪ್ರಮುಖ, ಪರಿಣಾಮಕಾರಿ ವಿದ್ಯಾರ್ಥಿ ಸಮುದಾಯದ ಮುಕ್ತ ಹಾಗೂ ಸಂಕೀರ್ಣ ಚರ್ಚೆಯ ಸಂಸ್ಕೃತಿಯನ್ನು  ನಿಯಂತ್ರಿಸಲು ಕಾಳಜಿ ವಹಿಸುತ್ತಿದೆ.

ಬಲ ಪಂಥೀಯವಾದಿಗಳನ್ನು ಹೊರತು ಪಡಿಸಿ ಉಳಿದ ದೇಶದ ಎಲ್ಲಾ ನಾಗರಿಕರು ಜೆಎನ್ ಯು ಚರ್ಚೆ ಹಾಗೂ ಸಂವಾದಕ್ಕಿರುವ ಅತ್ಯಂತ ಸೂಕ್ತ ವೇದಿಕೆ ಎಂದು ನಂಬುತ್ತಾರೆ. ದೇಶದಲ್ಲಿ ಭಿನ್ನವಾಗಿ ನಿಲ್ಲುವುದು, ವಿಭಿನ್ನಾಭಿಪ್ರಾಯ ಹೊಂದುವುದು ಮತ್ತು ಪ್ರತಿಭಟನೆ ನಡೆಸುವುದು ವಿದ್ಯಾರ್ಥಿ ಸಮುದಾಯದ ಸ್ವಾಭಾವಿಕ ಹಕ್ಕುಗಳ ಪರಿಧಿಯಲ್ಲೇ ಬರುತ್ತದೆ. ಎಬಿವಿಪಿಯು ಜೆಎನ್ ಯುವನ್ನು ಮುಚ್ಚುವಂತೆ ಆಗ್ರಹಿಸುತ್ತಿದೆ. ಆದರೆ ಎಬಿವಿಪಿಗೆ ತನ್ನ ಸಂವಾದವನ್ನು ಗೂಂಡಾಗಿರಿ ಮತ್ತು ವಿಧ್ವಂಸಕತನದಿಂದ ನಡೆಸಲು ಸಾಧ್ಯವಿಲ್ಲವೆಂದಾದಲ್ಲಿ ಜೆಎನ್ ಯುವನ್ನು ಮುಚ್ಚುವ ಅಗತ್ಯವಿಲ್ಲ ಬದಲಾಗಿ ಎಬಿವಿಪಿಯನ್ನು ನಿಷೇಧಿಸಬೇಕಾದ ಅಗತ್ಯತೆ ಇದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವು ಆಗ್ರಹಿಸಿದೆ.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವು ಜೆಎನ್ ಯುನೊಂದಿಗೂ ಜೆಎನ್ ಯುಎಸ್ ಯುನ ಪದಾಧಿಕಾರಿಗಳೊಂದಿಗೂ ಬಲವಾದ ಐಕ್ಯತೆಯನ್ನು ಕಾಪಾಡಿಕೊಂಡು ಬರುತ್ತದೆ. ಮಾತ್ರವಲ್ಲದೆ ಸಂಯುಕ್ತ ಸರ್ಕಾರ ಮತ್ತು ಮಾಧ್ಯಮಗಳು ಹತೋಟಿಯಲ್ಲಿರಬೇಕೆಂದೂ, ಇಡೀ ವಿಶ್ವ ವಿದ್ಯಾಲಯವನ್ನು ಮತ್ತು ಅದರ ವಿದ್ಯಾರ್ಥಿಗಳನ್ನು ನಿಂದಿಸಬಾರದೆಂದು ಕ್ಯಾಂಪಸ್ ಫ್ರಂಟ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News