ಪ್ರೀತಿಯಿಂದ ಚಳವಳಿಯನ್ನು ಕಟ್ಟೋಣ: ಪ್ರೊ.ಚಂದ್ರಶೇಖರ್ ಪಾಟೀಲ್; ‘ಕನ್ನಡ ಸೇವಾ ಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭ

Update: 2016-02-14 18:46 GMT

ಬೆಂಗಳೂರು, ಫೆ. 14: ಪ್ರೀತಿಯಿಂದ ಚಳವಳಿಯನ್ನು ಕಟ್ಟುವ ಮೂಲಕ ಸ್ವಾತಂತ್ರ, ಸಮಾನತೆ, ವಿಶ್ವಬಂಧುತ್ವವನ್ನು ಸಾಧಿಸಲು ಸಾಧ್ಯ. ಹೀಗಾಗಿ ಕನ್ನಡ ಚಳವಳಿಯೂ ಅದರ ಒಂದು ಭಾಗವಾಗಿರಲಿ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಕಸಾಪದಲ್ಲಿ ಡಾ.ರಾಜ್‌ಕುಮಾರ್ ಕನ್ನಡ ಸೇನೆಯಿಂದ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ಸೇವಾ ಭೂಷಣ ಪ್ರಶಸ್ತಿ’ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದೇ ಜಾತಿ, ಧರ್ಮ, ಕುಲದ ಜನರೆಲ್ಲರೂ ಒಂದು ಕಡೆ ನೆಲೆಸಲು ಸಾಧ್ಯವಿಲ್ಲ.

ಅಲ್ಲಿ ಎಲ್ಲ್ಲ ಜಾತಿ, ಧರ್ಮಗಳ ಜನರು ಒಗ್ಗೂಡಬೇಕು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಅದರಿಂದ ಎಲ್ಲರ ಪ್ರೀತಿಯನ್ನು ಗಳಿಸುತ್ತಾ ಮುನ್ನಡೆಯಬೇಕು. ಆ ಮೂಲಕ ನಾವು ಬಲಿಷ್ಠವಾಗಿ ಜನ ಚಳವಳಿಯನ್ನು ಸಂಘಟಿಸಬಹುದು. ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಲು ಸಾಧ್ಯ. ಆ ಹಿನ್ನೆಲೆಯಲ್ಲಿ ಪ್ರಜಾಫ್ರಭುತ್ವದ ವೌಲ್ಯಗಳನ್ನು ಉಳಿಸಬಹುದಾಗಿದೆ ಎಂದು ತಿಳಿಸಿದರು. ವಿಶ್ವದ ಎಲ್ಲೆಡೆ ಪ್ರೇಮಕ್ಕಾಗಿ ಹುತಾತ್ಮನಾದ ಸಂತನ ನೆನಪಿನಲ್ಲಿಂದು ಪ್ರೇಮಿಗಳ ದಿನಾಚರಣೆ ಮಾಡಲಾಗುತ್ತಿದೆ. ಆದರೆ, ಪ್ರೇಮಿಗಳೆಂದ ತಕ್ಷಣ ಹುಡುಗ ಮತ್ತು ಹುಡುಗಿ ಅಷ್ಟೇ ಎಂದು ಸೀಮಿತ ಮಾಡಲಾಗಿದೆ. ಇಂದು ನಮ್ಮಲ್ಲಿ ಪ್ರೀತಿಗೆ ಕೇವಲ ಒಂದು ದಾರಿ ಮಾತ್ರವಿಲ್ಲ. ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ ಹೀಗೆ ಹಲವು ಮಜಲುಗಳಿವೆ. ಅದೇ ರೀತಿಯಾಗಿ ನೆಲ-ಭಾಷೆಯ ನಡುವೆ ಮತ್ತು ನಾಡು-ನುಡಿಯ ಮಧ್ಯೆ ಇರುವಂತಹ ಪ್ರೀತಿಯು ಶ್ರೇಷ್ಠ ಮತ್ತು ಪವಿತ್ರವಾದುದಾಗಿದೆ. ಆದುದರಿಂದ ನಾವು ಪ್ರೀತಿಯಿಂದ ಎಲ್ಲವನ್ನು ಗೆಲ್ಲಬೇಕು ಎಂದು ಸಲಹೆ ನೀಡಿದರು.

ಗೋಕಾಕ್ ಚಳವಳಿಗೆ ಪ್ರೋತ್ಸಾಹವನ್ನು ನೀಡುವ ಮೂಲಕ ಕನ್ನಡ ಚಳವಳಿಗೆ ಶಕ್ತಿಯನ್ನು ನೀಡಿದ ನಟಸಾರ್ವಭೌಮ, ವರನಟ ಡಾ.ರಾಜ್‌ಕುಮಾರ್ ಹೆಸರಿನಲ್ಲಿ ಕನ್ನಡಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಿರುವಂತವರಿಗೆ ಪ್ರಶಸ್ತಿಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಅವರು ಬಣ್ಣಿಸಿದರು.

ಚಲನಚಿತ್ರ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡ ಚಳವಳಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಕೆಲವರು ಕನ್ನಡ ಚಳವಳಿ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸುವಂತಹ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಚಿತ್ರ ಸಾಹಿತಿ ಸಿ.ವಿ.ಶಿವಶಂಕರ್, ಲೇಖಕರು ಅ.ನಾ. ಪ್ರಹ್ಲಾದ ರಾವ್, ಚಲನಚಿತ್ರ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಅವರಿಗೆ ‘ಕನ್ನಡ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕ ದೊರೆ ಭಗವಾನ್, ಅನಿಕೇತನ ಬಳಗ ಅಧ್ಯಕ್ಷ ಮಾಯಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News