ಹೈ-ಕ ಭಾಗದ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿ: ಧರಂಸಿಂಗ್
Update: 2016-02-16 23:46 IST
ಬೀದರ್, ಫೆ.16: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯೂ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸವಾಲಾಗಿತ್ತು. ಬೇರೆ ಕ್ಷೇತ್ರಗಳ ಫಲಿತಾಂಶ ಏನೇ ಇರಲಿ, ಹೈದರಾಬಾದ್ ಕರ್ನಾಟಕ ಭಾಗದ ಕ್ಷೇತ್ರವನ್ನು ಮತ್ತೆ ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ್‌ನಲ್ಲಿ ಪಕ್ಷಕ್ಕೆ ಸಿಕ್ಕ ಅತಿದೊಡ್ಡ ಜಯಭೇರಿ ಇದಾಗಿದೆ. ಹೆಬ್ಬಾಳ ಕ್ಷೇತ್ರ ನಮ್ಮದಲ್ಲ, ಅದು ಬಿಜೆಪಿಯದ್ದು. ಆದರೆ, ದೇವದುರ್ಗದಲ್ಲಿ ಹಿನ್ನಡೆಯಾಗಿರುವುದು ನಿಜ. ಕೆಲವೊಂದು ಕಡೆ ಸೋಲು, ಕೆಲವೊಂದು ಕಡೆ ಗೆಲುವು ಸಾಮಾನ್ಯ. ಫಲಿತಾಂಶದಿಂದ ಸರಕಾರದ ವೈಫಲ್ಯ ಎತ್ತಿ ಹಿಡಿಯಲು ಸಾಧ್ಯವಿಲ್ಲ ಎಂದರು.