×
Ad

ಸಚಿವ ಬಂಡಾರು ದತ್ತಾತ್ರೇಯ, ಸ್ಮತಿ ಇರಾನಿಯವರನ್ನು ಬಂಧಿಸುವಂತೆ ಆಗ್ರಹ

Update: 2016-02-16 23:52 IST

ಬೆಂಗಳೂರು, ಫೆ. 16: ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಸಾವಿಗೆ ಕಾರಣರಾದ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ, ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಹಾಗೂ ಹೈದರಾಬಾದ್ ವಿವಿ ಕುಲಪತಿ ಅಪ್ಪಾರಾವ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ನಗರದ ಪುರಭವನದಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ರೋಹಿತ್ ವೇಮುಲ ಪರ ನ್ಯಾಯಕ್ಕಾಗಿ ಜಂಟಿ ಹೋರಾಟ ಸಮಿತಿ ರಾಜ್ಯದಾದ್ಯಂತ ವಿಶ್ವವಿದ್ಯಾನಿಲಯಗಳ ಬಂದ್‌ಗೆ ಕರೆ ನೀಡಿ, ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿತ್ತು. ಈ ರ್ಯಾಲಿಗೆ ಎಸ್‌ಎಫ್‌ಐ, ಎನ್‌ಎಸ್‌ಯುಐ, ಬಿವಿಎಸ್, ಎಸ್‌ಐಒ, ಡಿವೈಎಫ್‌ಐ ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.
ವಿಶ್ವವಿದ್ಯಾನಿಲಯಗಳಲ್ಲಿ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನಾ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದರು. ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಸಾವಿಗೆ ಕಾರಣರಾದ ಬಿಜೆಪಿಯ ಕೇಂದ್ರ ಸಚಿವರ ವಿರುದ್ಧ ಧಿಕ್ಕಾರವನ್ನು ಕೂಗುತ್ತಲೆ ಸ್ವಾತಂತ್ರ ಉದ್ಯಾನವನದವರೆಗೆ ಸಾಗಿ ಬಂದರು.
ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಹಿರಿಯ ಸಾಹಿತಿ ಪ್ರೊ.ಕೆ.ಮರುಳಸಿದ್ದಪ್ಪ ಮಾತನಾಡಿ, ದೇಶದಲ್ಲಿರುವ ವಿಶ್ವವಿದ್ಯಾಲಯಗಳ ಕುಲಪತಿಗಳು ಮೂರನೆ ದರ್ಜೆಯ ಪುಡಾರಿಗಳಾಗಿದ್ದು, ರಾಜಕೀಯ ವ್ಯಕ್ತಿಗಳ ಕೈಗೊಂಬೆಗಳಾಗಿ ಕಾರ್ಯನಿರ್ವಹಿಸುವವರಾಗಿದ್ದಾರೆ. ಇಂತಹವರಿಂದ ವಿಶ್ವವಿದ್ಯಾನಿಲಯಗಳ ಆವರಣದಲ್ಲಿ ಪ್ರೀತಿ, ವಿಶ್ವಾಸವನ್ನು ಕಾಣಲು ಸಾಧ್ಯವಿಲ್ಲ ಎಂದು ತಿಳಿಸಿದರು.
ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಮುಕ್ತ ಅವಕಾಶವಿದೆ. ಹಿಂಸೆಯನ್ನು ಹೊರತುಪಡಿಸಿ ತಮ್ಮ ಅಭಿಪ್ರಾಯವನ್ನು ನಿರ್ಭಯವಾಗಿ ಹಂಚಿಕೊಳ್ಳಬಹುದಾಗಿದೆ. ಆ ಮಾದರಿಯಲ್ಲಿಯೆ ರೋಹಿತ್ ವೇಮುಲ ಅಂಬೇಡ್ಕರ್‌ರವರ ರಾಜಕೀಯ ಸಿದ್ಧಾಂತದ ಅಡಿಯಲ್ಲಿ ತಮ್ಮ ನಿಲುವನ್ನು ಅಭಿವ್ಯಕ್ತಪಡಿಸುತ್ತಿದ್ದರು. ಇದನ್ನು ಸಹಿಸದ ಎಬಿವಿಪಿ ಕಾರ್ಯಕರ್ತರು ಹಾಗೂ ಬಿಜೆಪಿ ಸಚಿವರು ವೇಮುಲ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ನಿರಂತರವಾಗಿ ಕಿರುಕುಳ ನೀಡಿದ್ದಾರೆ. ಇದು ರೋಹಿತ್ ವೇಮುಲ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಗುಪ್ತಚರ ಇಲಾಖೆಯ ಕೆಲಸವನ್ನು ಸಂಘಪರಿವಾರ ಮಾಡುತ್ತಿದ್ದು, ಇವರು ಕೊಟ್ಟ ವರದಿಯನ್ನೆ ಚಾಚೂತಪ್ಪದೆ ಅನುಷ್ಠಾನಕ್ಕೆ ತರಲಾಗುತ್ತಿದೆ. ರೋಹಿತ್ ವೇಮುಲ ವಿರುದ್ಧ ಎಬಿವಿಪಿ ದೂರು ಕೊಟ್ಟ ಮಾತ್ರಕ್ಕೆ ಕೇಂದ್ರ ಸಚಿವರು ವೇಮುಲರನ್ನು ಹಾಸ್ಟೆಲ್‌ನಿಂದ ಹೊರ ಹಾಕುವಂತೆ ಆದೇಶಿಸಿದರು. ಹೀಗಾಗಿ ದೇಶದಲ್ಲಿ ಬಿಪಿಜೆಯ ಮೂಲಕ ಸಂಘಪರಿವಾರ ಆಡಳಿತ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಹಣೆಗೆ ನಾಮ ಬಳಿದವರನ್ನು ದೇಶ ಭಕ್ತರೆಂದು, ದೇಶದಲ್ಲಿರುವ ಸಮಸ್ಯೆಗಳ ಕುರಿತು ಮಾತನಾಡುವವರನ್ನು ದೇಶದ್ರೋಹಿಗಳೆಂದು ದೃಢೀಕರಿಸಲು ಕೇಂದ್ರ ಸರಕಾರ ಹೊಂಚು ಹಾಕುತ್ತಿದೆ. ಆ ಮೂಲಕ ಬಿಜೆಪಿ ಸರಕಾರ ದೇಶದ ಜನತೆಯನ್ನು ಸಂಕುಚಿತ ಮನೋಭಾವನೆಯಿಂದ ನೋಡುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.
ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಅವಕಾಶ ಸಿಕ್ಕರೆ ಪ್ರತಿಯೊಬ್ಬರು ಪ್ರತಿಭಾವಂತರಾಗುತ್ತಾರೆ ಎಂಬುದನ್ನು ರೋಹಿತ್ ವೇಮುಲ ಸಾಬೀತುಪಡಿಸಿದ್ದಾನೆ. ಆತನ ಪ್ರತಿಭೆಯನ್ನು ಸಹಿಸದ ಕೋಮುವಾದಿಗಳು ನಿರಂತರವಾಗಿ ಕಿರುಕುಳ ನೀಡಿ ಆತ್ಮಹತ್ಯೆಗೆ ದೂಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡ ಜಿ.ಎನ್. ನಾಗರಾಜ್, ಎಸ್ಸಿ, ಎಸ್ಟಿ ಪ್ರಾಧ್ಯಾಪಕ ಸಂಘದ ಅಧ್ಯಕ್ಷ ಪ್ರೊ.ಕೃಷ್ಣಪ್ಪ, ಸಮತಾ ಸೈನಿಕಾ ದಳದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ಸಮಾಜ ಪರಿವರ್ತನಾ ವೇದಿಕೆಯ ಅಧ್ಯಕ್ಷ ಬಿ.ಗೋಪಾಲ್, ದಲಿತ ಸಂರಕ್ಷ ಸಮಿತಿಯ ಅಧ್ಯಕ್ಷ ಲಯನ್ ಬಾಲಕೃಷ್ಣ, ವಕೀಲ ಅನಂತ್ ನಾಯ್ಕಾ, ಎಸ್‌ಎಫ್‌ಐನ ಅಧ್ಯಕ್ಷ ವಿ.ಅಂಬರೀಷ್, ಡಿಎಸ್‌ಎಫ್ ರಾಜ್ಯ ಸಂಚಾಲಕ ವಿ.ಎಂ.ಸಂಘರ್ಷ ಮತ್ತಿತರರಿದ್ದರು.

ಪ್ರಧಾನಿ ನರೇಂದ್ರ ಮೋದಿ ಆಡಳಿತವು ಹಿಟ್ಲರ್ ಮಾದರಿಯಾಗಿದ್ದು, ಅದೇ ರೀತಿಯ ಸರ್ವಾಧಿಕಾರಿ ಧೋರಣೆಯನ್ನು ಹೋಲುವಂತಿದೆ. ನಾಝಿ ಸಿದ್ಧಾಂತಕ್ಕೂ ಸಂಘ ಪರಿವಾರದ ಸಿದ್ಧಾಂತಕ್ಕೂ ಸಾಮ್ಯತೆಗಳಿದ್ದು, ಸಂಘಪರಿವಾರ ರೂಪಿಸಿದ ಕಾನೂನುಗಳನ್ನು ಜಾರಿ ಮಾಡುವುದಷ್ಟೆ ಬಿಜೆಪಿ ಕರ್ತವ್ಯವಾಗಿದೆ.
ಪ್ರೊ.ಕೆ.ಮರುಳಸಿದ್ದಪ್ಪ, ಹಿರಿಯ ಸಾಹಿತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News