ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಫೆ.17: ವಿಧಾನಸಭೆ ಉಪಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷಕ್ಕೆ ತೆಂಗಿನಕಾಯಿ ಚಿಹ್ನೆ ನೀಡದಿರುವುದು ಹಾಗೂ ಪಕ್ಷೇತರ ಅಭ್ಯರ್ಥಿ ಎಂದು ಪ್ರಕಟಿಸಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ಜನತಾ ಪಕ್ಷ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ. ಕರ್ನಾಟಕ ಜನತಾ ಪಕ್ಷವನ್ನು ರಾಜಕೀಯ ಪಕ್ಷ ಎಂದು ರಾಜ್ಯ ಸರಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದು, ಪಕ್ಷದ ಚಿಹ್ನೆಯನ್ನು ತೆಂಗಿನಕಾಯಿ ಎಂದು ಘೋಷಿಸಿದೆ. ಅಲ್ಲದೆ, ಉಪಚುನಾವಣೆಗೆ ಹೆಬ್ಬಾಳ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಕೆಜೆಪಿ ಎಂದು ನಮೂದಿಸಲಾಗಿದೆ. ಆದರೆ, ಅಂತಿಮ ಹಂತದಲ್ಲಿ ಚುನಾವಣಾ ಅಧಿಕಾರಿಗಳು ನಮ್ಮ ಅಭ್ಯರ್ಥಿಯನ್ನು ಪಕ್ಷೇತರ ಎಂದು ಘೋಷಿಸಿ ತೆಂಗಿನಕಾಯಿ ಬದಲಿಗೆ ಬಲೂನ್ ಚಿಹ್ನೆಯನ್ನು ನೀಡಿದ್ದಾರೆ. ಹೀಗಾಗಿ, ಚುನಾವಣೆಗೆ ಹೊರಡಿಸಿದ್ದ ಅಧಿಸೂಚನೆ ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.