50 ವರ್ಷಗಳಿಂದ ವಾಸವಿರುವ ಜನರನ್ನು ತೆರವುಗೊಳಿಸುವ ಕ್ರಮಕ್ಕೆ ಹೈಕೋರ್ಟ್ ತಡೆ
Update: 2016-02-17 23:43 IST
ಬೆಂಗಳೂರು, ಫೆ.17: ದೇವನಹಳ್ಳಿ ನಗರದ ವಾರ್ಡ್ ಸಂಖ್ಯೆ 22ರಲ್ಲಿ ಕಳೆದ 50 ವರ್ಷಗಳಿಂದ ನೆಲೆಸಿದ್ದವರನ್ನು ತೆರವುಗೊಳಿಸಲು ಮುಂದಾಗಿರುವ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದೆ. ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಅವರಿದ್ದ ಏಕಸದಸ್ಯ ನ್ಯಾಯಪೀಠವು ಸರಕಾರಕ್ಕೆ ತುರ್ತು ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆವರೆಗೂ ಯಾವುದೇ ರೀತಿಯ ತೆರವು ಕಾರ್ಯಕ್ಕೆ ಮುಂದಾಗಬಾರದು ಎಂದು ಸೂಚಿಸಿದೆ. ಕಳೆದ 50 ವರ್ಷಗಳಿಗೂ ಹೆಚ್ಚಿನ ಕಾಲ ವಾಸವಿದ್ದು, ಇದ್ದಕ್ಕಿದ್ದ ಹಾಗೆ ಮುನ್ಸಿಪಲ್ ಪ್ರಾಧಿಕಾರ ನೋಟಿಸ್ ನೀಡದೆ ತೆರವು ಕಾರ್ಯಕ್ಕೆ ಮುಂದಾಗಿದೆ. ಈ ರೀತಿಯ ತೆರವು ಮಾಡುವ ಸಂದರ್ಭದಲ್ಲಿ ಅಲ್ಲಿ ನೆಲೆಸಿರುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶವಿದೆ. ಆದರೆ, ಪ್ರಾಧಿಕಾರ ಯಾವುದೇ ವ್ಯವಸ್ಥೆ ಕಲ್ಪಿಸದೆ ತೆರವು ಕಾರ್ಯಕ್ಕೆ ಮುಂದಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.