×
Ad

ಬಿಬಿಎಂಪಿ: ಪ್ಲಾನಿಂಗ್ ಕಮಿಟಿಗೆ 18 ಮಂದಿ ಅವಿರೋಧ ಆಯ್ಕೆ

Update: 2016-02-17 23:45 IST

ಬೆಂಗಳೂರು, ಫೆ.17: ನಗರವನ್ನು ಯೋಜನಾಬದ್ಧವಾಗಿ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋಪಾಲಿಟನ್ ಪ್ಲಾನಿಂಗ್ ಕಮಿಟಿಗೆ (ಯೋಜನಾ ಸಮಿತಿ) ಬಿಬಿಎಂಪಿ ವತಿಯಿಂದ 18 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಬಿಬಿಎಂಪಿ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿಯ 9 ಮಂದಿ, ಕಾಂಗ್ರೆಸ್‌ನ 7 ಹಾಗೂ ಜೆಡಿಎಸ್‌ನ ಇಬ್ಬರು ಪ್ಲಾನಿಂಗ್ ಕಮಿಟಿಗೆ ಅವಿರೋಧವಾಗಿ ಆಯ್ಕೆಯಾದರು. ಬೆಳಗ್ಗೆ 8:30ಕ್ಕೆ ಚುನಾವಣಾ ಪ್ರಕ್ರಿಯೆ ಶುರುವಾದಾಗ 10:30ರವರೆಗೆ 18 ಮಂದಿ ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ನಂತರ ಒಂದು ಗಂಟೆ ನಾಮಪತ್ರಗಳನ್ನು ಪರಿಶೀಲನೆ ಮಾಡಲಾಯಿತು. 11:30ಕ್ಕೆ ಸಭಾಂಗಣದಲ್ಲಿ ಸದಸ್ಯರ ಹಾಜರಾತಿ ತೆಗೆದುಕೊಳ್ಳಲಾಯಿತು. ನಂತರ ಸಲ್ಲಿಕೆಯಾಗಿದ್ದ ಎಲ್ಲ 18 ನಾಮಪತ್ರಗಳು ಕ್ರಮಬದ್ಧವಾಗಿರುವುದಾಗಿ ಚುನಾ ವಣಾಧಿಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತೆ ಜಯಂತಿ ಪ್ರಕಟಿಸಿದರು.
ನಂತರ ನಾಮಪತ್ರ ವಾಪಸ್ ಪಡೆಯಲು ಐದು ನಿಮಿಷಗಳ ಕಾಲಾವಕಾಶ ನೀಡಲಾಯಿತು. ಈ ವೇಳೆ ಯಾರೂ ನಾಮಪತ್ರ ವಾಪಸ್ ಪಡೆಯಲಿಲ್ಲ. ಇದರಿಂದ ಎಲ್ಲ 18 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟಿಸಿದರು. ಅವಿರೋಧವಾಗಿ ಆಯ್ಕೆಯಾದ 18 ಮಂದಿ ಸದಸ್ಯರಲ್ಲಿ 9 ಮಂದಿ ಬಿಜೆಪಿ ಸದಸ್ಯರು, 7 ಮಂದಿ ಕಾಂಗ್ರೆಸ್ ಹಾಗೂ ಇಬ್ಬರು ಜೆಡಿಎಸ್ ಸದಸ್ಯರು ಸೇರಿದ್ದಾರೆ. ಆಯ್ಕೆಯಾದವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಪ್ಲಾನಿಂಗ್ ಕಮಿಟಿಗೆ ಆಯ್ಕೆಯಾದವರು ಪಾಲಿಕೆ ಸದಸ್ಯರಾಗಿರುವವರೇ ಈ ಕಮಿಟಿಯ ಸದಸ್ಯರಾಗಿರುತ್ತಾರೆ ಎಂದು ಪ್ರಾದೇಶಿಕ ಆಯುಕ್ತೆ ಜಯಂತಿ ಪ್ರಕಟಿಸಿದರು.

ಆಯ್ಕೆಯಾದ ಸದಸ್ಯರು
ಆರ್.ಎಸ್. ಸತ್ಯನಾರಾಯಣ (ವಾರ್ಡ್ ನಂ. 77), ಗುಣಶೇಖರ್ (ವಾರ್ಡ್ ನಂ. 63), ಆರ್. ಸಂಪತ್‌ರಾಜ್ (ವಾರ್ಡ್ ನಂ. 47), ನೌಶಿರ್ ಅಹ್ಮದ್ (ವಾರ್ಡ್ ನಂ. 30), ಮಮತಾ ಕೆ.ಎಂ. (ವಾರ್ಡ್ ನಂ. 6), ಆರ್. ಪದ್ಮಾವತಿ ಅಮರನಾಥ್ (ವಾರ್ಡ್ ನಂ. 2), ಡಿ.ಎನ್. ಮಂಜುನಾಥರೆಡ್ಡಿ (ವಾರ್ಡ್ ನಂ. 172), ಕೆ. ಉಮೇಶ್ ಶೆಟ್ಟಿ (ವಾರ್ಡ್ ನಂ. 104), ಮಂಜುಳಾ ಎನ್. ಸ್ವಾಮಿ (ವಾರ್ಡ್ ನಂ. 69), ಎಂ. ನಾಗರಾಜ್ (ವಾರ್ಡ್ ನಂ. 34), ಕೆ. ಪೂರ್ಣಿಮಾ (ವಾರ್ಡ್ ನಂ. 52), ಎಂ. ವೆಂಕಟೇಶ್ (ವಾರ್ಡ್ ನಂ. 163), ಎಸ್. ಸಂಪತ್‌ಕುಮಾರ್ (ವಾರ್ಡ್ ನಂ. 93), ಕೆ. ನರಸಿಂಹ ನಾಯಕ್ (ವಾರ್ಡ್ ನಂ. 14), ಶಶಿರೇಖ ಎಂ. (ವಾರ್ಡ್ ನಂ. 79), ವಿ.ವಿ. ಸತ್ಯನಾರಾಯಣ (ವಾರ್ಡ್ ನಂ. 159), ಬಿ.ಎನ್. ಶೋಭಾ ಮುನಿರಾಂ (ವಾರ್ಡ್ ನಂ. 186), ಗಂಗಮ್ಮ (ವಾರ್ಡ್ ನಂ. 74).

ಅಧ್ಯಕ್ಷರ ಆಯ್ಕೆಗೆ ಆಗ್ರಹ
ಕೌನ್ಸಿಲ್ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗುವ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮಧ್ಯಪ್ರವೇಶಿಸಿ, ಕಮಿಟಿಗೆ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಆದರೆ, ಅಧ್ಯಕ್ಷರ ಆಯ್ಕೆ ಮಾಡಲಾಗುತ್ತಿಲ್ಲ. ಈ ಕಾರ್ಯವನ್ನು ಯಾವಾಗ ಮಾಡಲಾಗುತ್ತದೆ ಎಂದು ಪ್ರಾದೇಶಿಕ ಆಯುಕ್ತರು ಪ್ರಕಟಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರಾದೇಶಿಕ ಆಯುಕ್ತೆ ಜಯಂತಿ ಅವರು ಪ್ರತಿಕ್ರಿಯಿಸಿ ತಮಗೆ 18 ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲು ಅಧಿಕಾರವಿದೆ. ಆಯ್ಕೆಯಾದ ಸದಸ್ಯರ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸುತ್ತೇವೆ. ಸರಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿ ಚುನಾವಣೆ ಪ್ರಕ್ರಿಯೆ ಮುಂದುವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News