ಚುನಾವಣಾ ಆಯೋಗದಿಂದ ಸಕಲ ಸಿದ್ಧತೆ
ಬೆಂಗಳೂರು, ಫೆ.18: ರಾಜ್ಯದ 15 ಜಿಲ್ಲೆಗಳ ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ನ ಎರಡನೆ ಹಂತದ ಮತದಾನವು ಫೆ.20ರಂದು ನಡೆಯಲಿದ್ದು, ರಾಜ್ಯ ಚುನಾವಣಾ ಆಯೋಗವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
15 ಜಿಲ್ಲೆಯ 531 ಜಿಲ್ಲಾ ಪಂಚಾಯತ್ ಸ್ಥಾನಗಳು ಹಾಗೂ ತಾಲೂಕು ಪಂಚಾಯತ್‌ನ 1,939 ಸ್ಥಾನಗಳಿಗೆ ನಡೆಯಲಿರುವ ಮತದಾನಕ್ಕಾಗಿ 17,698 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 3,626 ಅತೀ ಸೂಕ್ಷ್ಮ, 4,097 ಸೂಕ್ಷ್ಮ ಮತಗಟ್ಟೆಗಳೆಂದು ಚುನಾವಣಾ ಆಯೋಗ ಗುರುತಿಸಿದೆ.
ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ಬೀದರ್, ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ಫೆ.20ರಂದು ಮತದಾನ ನಡೆಯಲಿದೆ. 72.21 ಲಕ್ಷ ಪುರುಷ ಮತದಾರರು ಹಾಗೂ 70.52 ಲಕ್ಷ ಮಹಿಳಾ ಮತದಾರರೊಂದಿಗೆ 400 ಮಂದಿ ಇತರ ಮತದಾರರು ಸೇರಿದಂತೆ ಒಟ್ಟು 1.42 ಕೋಟಿ ಮತದಾರರು ಎರಡನೆ ಹಂತದ ಮತದಾನದಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಮತದಾನದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ನಕ್ಸಲ್ ಪೀಡಿತ ಹಾಗೂ ಗಡಿ ಭಾಗದ ಜಿಲ್ಲೆಗಳಲ್ಲಿ ಸಿಆರ್‌ಪಿಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ. ಚುನಾವಣಾ ಅಧಿಕಾರಿಗಳು, ಮಟ್ಟಗಟ್ಟೆ ಸಿಬ್ಬಂದಿ ಶುಕ್ರವಾರ ಬೆಳಗ್ಗೆ ನಿಗದಿತ ಮತಗಟ್ಟೆಗಳ ಉಸ್ತುವಾರಿಯ ಕಾರ್ಯಾಭಾರ ವಹಿಸಿಕೊಳ್ಳಲಿದ್ದಾರೆ.