ಬೆಂಬಲ ಬೆಲೆಯಡಿ ಭತ್ತ, ರಾಗಿ ಖರೀದಿಗೆ 320 ಕೋಟಿ ರೂ. ಬಿಡುಗಡೆಗೆ ಸರಕಾರದ ನಿರ್ಧಾರ
ಬೆಂಗಳೂರು, ಫೆ. 19: ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ್ದ ಭತ್ತ ಮತ್ತು ರಾಗಿ ಬೆಳೆಗಾರರಿಗೆ ಪಾವತಿಸಬೇಕಿದ್ದ 220ಕೋಟಿ ರೂ. ಬಾಕಿಮೊತ್ತ ಹಾಗೂ ಹೊಸದಾಗಿ ಖರೀದಿಸಲು 100 ಕೋಟಿ ರೂ.ಗಳು ಸೇರಿದಂತೆ ಒಟ್ಟು 320 ಕೋಟಿ ರೂ.ಗಳನ್ನು ಆವರ್ತ ನಿಧಿಯಿಂದ ಬಿಡುಗಡೆ ಮಾಡಲು ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ಶುಕ್ರವಾರ ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರ ದಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯಲ್ಲಿ, ಕೃಷಿ ಸಚಿವ ಕೃಷ್ಣ ಬೈರೇಗೌಡ, ಆಹಾರ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತಿಯಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಮೇಲ್ಕಂಡ ನಿರ್ಧಾರ ಕೈಗೊಳ್ಳಲಾಗಿದೆ.
ಭತ್ತಕ್ಕೆ ಬೆಂಬಲ ಬೆಲೆ ಯೋಜನೆಯಡಿ 1,410 ರೂ. ನಿಗದಿಪಡಿಸಿದ್ದು, ರಾಜ್ಯ ಸರಕಾರ 100 ಪ್ರೋತ್ಸಾಹಧನ ಸೇರಿ ಪ್ರತಿ ಕ್ವಿಂಟಾಲ್‌ಗೆ ಒಟ್ಟು 1,510 ರೂ.ನಂತೆ ಖರೀದಿಸಲು ನಿರ್ಧರಿಸಿತ್ತು. ಅದೇ ರೀತಿಯಲ್ಲಿ ರಾಗಿಗೆ ಬೆಂಬಲ ಬೆಲೆ ಯೋಜನೆಯಡಿ 1,650 ರೂ.ನಿಗದಿಪಡಿಸಿದ್ದು, ರಾಜ್ಯ ಸರಕಾರದ 450 ರೂ.ಪ್ರೋತ್ಸಾಹ ಧನ ಸೇರಿದಂತೆ ಒಟ್ಟು 2,100 ರೂ.ಗಳನ್ನು ನಿಗದಿಪಡಿಸಲಾಗಿತ್ತು.
ರಾಜ್ಯದಲ್ಲಿ ಭತ್ತ, ರಾಗಿ ಮತ್ತು ಬಿಳಿಜೋಳವನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ತೀರ್ಮಾನಿಸಿತ್ತು. ಆ ಹಿನ್ನೆಲೆಯಲ್ಲಿ ಆಹಾರ ನಿಗಮ, ಉಗ್ರಾಣ ನಿಗಮ ಸೇರಿದಂತೆ ಮೂರು ನಿಗಮಗಳಿಂದ ಈವರೆಗೂ ಒಟ್ಟು 5.66ಲಕ್ಷ ಕ್ವಿಂಟಾಲ್ ಭತ್ತ, 7.44 ಲಕ್ಷ ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗಿದೆ.
ಬಿಳಿಜೋಳಕ್ಕೆ ಬೆಂಬಲ ಬೆಲೆ ಯೋಜನೆಯಡಿ 1,590 ರೂ.ನಿಗದಿಪಡಿಸಿದ್ದು, ರಾಜ್ಯ ಸರಕಾರ 510 ರೂ.ಪ್ರೋತ್ಸಾಹ ಧನ ಸೇರಿದಂತೆ ಒಟ್ಟು 2,100 ರೂ.ಗಳಿಗೆ ಖರೀದಿಸಲು ತೀರ್ಮಾನಿಸಲಾಗಿತ್ತು. ಆದರೆ, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇವಲ 91 ಕ್ವಿಂಟಾಲ್ ಬಿಳಿಜೋಳವನ್ನು ಖರೀದಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರದಿಂದ ಬಾಕಿ: ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಸೇರಿದಂತೆ ಇನ್ನಿತರ ಆಹಾರ ಧಾನ್ಯಗಳ ಖರೀದಿಗೆ ಕೇಂದ್ರ ಸರಕಾರ ನೀಡಬೇಕಿದ್ದ ಒಟ್ಟು 1 ಸಾವಿರ ಕೋಟಿ ರೂ.ಗಳನ್ನು ಈವರೆಗೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಬೆಂಬಲ ಬೆಲೆ ಯೋಜನೆಯಡಿ ರೈತರು ಬೆಳೆದ ಆಹಾರ ಧಾನ್ಯಗಳ ಖರೀದಿಗೆ ತೊಡಕಾಗಿದೆ.
ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದ್ದು, ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಹಾಗೂ ಬಿಳಿಜೋಳ ಖರೀದಿಗೆ ಕೇಂದ್ರ ಸರಕಾರ ಬಾಕಿ ಉಳಿಸಿಕೊಂಡಿರುವ ಮೊತ್ತ ಬಿಡುಗಡೆಗೆ ಕೋರಿ ಪತ್ರವೊಂದನ್ನು ಬರೆಯಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.