ಮೂಢನಂಬಿಕೆಯ ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕು: ಬೌದ್ಧ ವಿಹಾರದ ಸಂಘಾನಂದ ಬಂತೇಜಿ
ಬೆಂಗಳೂರು/ಚಿತ್ರದುರ್ಗ, ಫೆ. 20: ಜ್ಞಾನವಿದ್ದರೆ ಧರ್ಮ, ಧರ್ಮವಿದ್ದರೆ ಜ್ಞಾನ ಎಂಬುದನ್ನು ಅರಿಯಬೇಕು. ನುಡಿದಂತೆ ನಡೆದು, ನಡೆದಂತೆ ನುಡಿದ ಧರ್ಮಕ್ಕೆ ಎಲ್ಲರೂ ಶರಣಾಗಬೇಕು. ಸಾರ್ವಜನಿಕರು ಮೂಢನಂಬಿಕೆಯ ಕತ್ತಲಿನಿಂದ ಹೊರಬಂದು ಬೆಳಕಿನಡೆಗೆ ಸಾಗಬೇಕಿದೆ ಎಂದು ಕಲಬುರಗಿ ಬೌದ್ಧ ವಿಹಾರದ ಸಂಘಾನಂದ ಬಂತೇಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರ ಚಿತ್ರದುರ್ಗ ಮುರುಘಾ ಮಠದಲ್ಲಿ ಏರ್ಪಡಿಸಿದ್ದ ಸರ್ವಧರ್ಮ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಕಲ ಜೀವಿಗಳಿಗೆ ಕಲ್ಯಾಣವಾಗಲಿ. ವೌಢ್ಯದ ಕತ್ತಲಿನಲ್ಲಿದ್ದ ಜನರನ್ನು ಬೆಳಕಿನಡೆಗೆ ತಂದವರೆಂದರೆ ಬುದ್ಧ ಎಂದು ನುಡಿದರು.
‘ಗಾಳಿ ಬಿಟ್ಟಿತೋ ಧೂಳಿಗೆ, ಧೂಳು ಬಿಟ್ಟಿತೋ ಗಾಳಿಗೆ’ ಎಂಬಂತೆ ಸರ್ವಧರ್ಮ ಸಮಾವೇಶದಲ್ಲಿ ಬೌದ್ದ ಧರ್ಮದವರನ್ನು ಕರೆಸಿರುವುದು ಅಭಿನಂದನಾರ್ಹ. ಪಾಲಿ ಭಾಷೆಯ ‘ಬುದ್ಧಂ ಶರಣಂ ಗಚ್ಚಾಮಿ’ ಎಂದು ಬುದ್ಧ ಹೇಳಿದ್ದಾರೆ ಎಂದು ಬಂತೇಜಿ ಇದೇ ವೇಳೆ ಸ್ಮರಿಸಿದರು.
ಸಮಾವೇಶದಲ್ಲಿ ‘ಶರಣ ಸಂಸ್ಕೃತಿ’ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿ ಮಾತನಾಡಿದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ ಮಾತನಾಡಿ, ಸಾತ್ವಿಕ ಮಾರ್ಗದಿಂದ ಉತ್ತಮ ಸಂಸ್ಕಾರಗೊಂಡು ಬಾಳುವುದು ಎಲ್ಲ್ಲ ಧರ್ಮದ ಉದ್ದೇಶ. ಆದರಿಂದ ಬಸವಣ್ಣ ‘ದಯವೇ ಧರ್ಮದ ಮೂಲವಯ್ಯಾ’ ಎಂದಿದ್ದಾರೆ. ಧರ್ಮ ಎಂಬುದು ಒಂದೇ ಇದ್ದು ಮಠ-ಪಂಥಗಳು ಬೇರೆಬೇರೆಯಾಗಿವೆ ಎಂದರು.
ಯಾವುದೇ ಧರ್ಮವಾದರೂ ಎಲ್ಲ್ಲ ಜನರನ್ನು ಸೇರಿಸುವುದು ಎಂದರ್ಥ. ವೈಯಕ್ತಿಕ ಸ್ವಾರ್ಥ ಸಾಧನೆಗೆ ಒಳಗಾಗಬಾರದು. ಧರ್ಮದ ಅರ್ಥ ಮಾಡಿಕೊಂಡು ಧರ್ಮಕ್ಕೆ ನಿಷ್ಠೆಯಿಂದ ಬಾಳುವ ದೇಶ ಭಾರತ. ಯಾವುದೇ ಧರ್ಮ ಇತರ ಧರ್ಮದ ಮೇಲೆ ದಬ್ಬಾಳಿಕೆ ಮಾಡಬಾರದು. ಒಂದೇ ಭೂಮಿ, ನೆಲ ಜಲ, ಒಂದೇ ತಾಯಿಯೆಂಬ ಭಾವನೆಯಿಂದ ಬಾಳಬೇಕು ಎಂದು ಸಲಹೆ ನೀಡಿದರು.
ಎಪಿಜೆ ಅಬ್ದುಲ್ ಕಲಾಂರವರು ಸ್ಪಿರಿಚುಯೆಲ್ ಪಾರ್ಕ್ ನಿರ್ಮಾಣ ಮಾಡಿದ್ದಾರೆ. ಅಲ್ಲಿ ಎಲ್ಲ ಧರ್ಮದ ಮರ ನೆಟ್ಟಿದ್ದಾರೆ. ಅವರು ಕೊನೆಯಲ್ಲಿ ಎಲ್ಲ್ಲ ರೀತಿಯ ಮರಗಳು ಒಂದೇ ಭೂಮಿಯಲ್ಲಿ ಬೆಳೆಯುತ್ತವೆ. ಆದರೆ, ಒಂದೇ ಭೂಮಿಯಲ್ಲಿ ಎಲ್ಲ ಧರ್ಮೀಯರು ಬಾಳುವುದು ಏಕೆ ಸಾಧ್ಯವಿಲ್ಲ ಎಂದು ಬರೆಸಿದ್ದಾರೆ ಎಂದು ಶ್ರೀಮಠದ ಕಾರ್ಯವನ್ನು ಶ್ಲಾಘನೆ ಮಾಡಿದರು.
ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮಿ ಮಾತನಾಡಿ, ಜಗತ್ತಿನಲ್ಲಿ ಜಿಜ್ಞಾಸೆಗೆ ಒಳಪಟ್ಟಿದ್ದು ಧರ್ಮ. ಎಷ್ಟು ಸಮಾವೇಶ ಮಾಡಿದರು, ಧರ್ಮದ ಪ್ರಚಾರ ಸಾಲದು. ಧರ್ಮವೆಂಬುದು ಕಾಲ, ದೇಶವನ್ನು ಅವಲಂಭಿಸಿ ಸೃಷ್ಠಿಯಾಗಿದೆ. ಸಮಸ್ತ ಚಿಂತನೆಯೆ ನಿಜವಾದ ಧರ್ಮ. ಯತಿ, ಮಹರ್ಷಿ, ಸ್ವಾಮೀಜಿಗಳು ಸಮಸ್ತ ಜೀವಿಗಳ ಚಿಂತನೆ ಮಾಡುವುದು ಶ್ರೇಷ್ಠ.
ಇಂತಹ ಸಮಸ್ತ ಚಿಂತನೆಯಿಂದ ಸಮಾಜವು ಮತ್ತು ದೇಶವು ಸುಸ್ಥಿತಿಯಲ್ಲಿರುತ್ತದೆ. ಮುರುಘಾ ಮಠದ ಶ್ರೀಗಳು ಕ್ರಾಂತಿಕಾರಕ ವಿಶಿಷ್ಠ ಶೈಲಿಯಲ್ಲಿ ಧಾರ್ಮಿಕ, ವೈಚಾರಿಕ ವಿಚಾರಗಳಿಗೆ ಸಹಕರಿಸುವವರಾಗಿದ್ದಾರೆ. ಸಂಪ್ರದಾಯ ಕಟ್ಟಿ ಹಾಕಿದ ಗಾಳಿ ಆಗಬಾರದು, ಅದು ಎಲ್ಲೆಡೆ ಪಸರಿಸುವಂತಾಗಬೇಕು ಎಂದು ನುಡಿದರು.
ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ಕರ್ನಾಟಕ ಮತ್ತು ಗೋವಾ ಎಜಿ ಸಂಸ್ಥೆಯ ಸೀನಿಯರ್ ಪಾಸ್ಟರ್ ರೆವರೆಂಡ್ ಪಾಲ್ ತಂಗಯ್ಯ, ಬೀದರ್‌ನ ಗುರುದ್ವಾರ ದರ್ಬಾರ್‌ಸಿಂಗ್‌ಜೀ, ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ ಸ್ವಾಮಿ, ಕರ್ನಾಟಕ ಎಸ್‌ಎಸ್‌ಎಫ್ ಅಧ್ಯಕ ಎನ್.ಎ. ಶಾಫಿ ಸಅದಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.