ಇತಿಹಾಸದ ಜಾತಿ ಸಂಘರ್ಷಕ್ಕೆ ಸರ್ವಜ್ಞನ ತ್ರಿಪದಿಗಳು ಸಾಕ್ಷಿ: ಸಚಿವೆ ಉಮಾಶ್ರೀ
ಬೆಂಗಳೂರು, ಫೆ.20: ಭಾರತದಲ್ಲಿ ಜಾತಿ ಸಂಘರ್ಷಗಳು ಒಂದು ವರ್ಗದ ಜನತೆಯನ್ನು ಹತಾಶೆಗೆ ತಳ್ಳಿದೆ ಎಂಬುದಕ್ಕೆ ಕವಿ ಸರ್ವಜ್ಞನ ತ್ರಿಪದಿಗಳು ಸಾಕ್ಷಿಯನ್ನು ಒದಗಿಸುತ್ತವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ವಿಷಾದ ವ್ಯಕ್ತಪಡಿಸಿದ್ದಾರೆ.
ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕವಿ ಸರ್ವಜ್ಞ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ನೆಲದಲ್ಲಿ ನೂರಾರು ವರ್ಷಗಳಿಂದಲೂ ಜಾತಿ ಸಂಘರ್ಷಗಳು ನಡೆಯುತ್ತಾ ಬಂದಿವೆ. ಇದರ ವಿರುದ್ಧವಾಗಿ ಸರ್ವಜ್ಞ ಸೇರಿದಂತೆ ಅನೇಕ ಕವಿ, ಸಂತರು ಜಾಗೃತಿ ಮೂಡಿಸಿದ್ದಾರೆ. ಆದರೂ ಜಾತಿ ತಾರತಮ್ಯಗಳು ಹಾಗೆಯೇ ಮುಂದುವರಿಯುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸರ್ವಜ್ಞನ ತ್ರಿಪದಿಗಳು ಜ್ಞಾನದ ಭಂಡಾರವಾಗಿದೆ. ಕೇವಲ ಮೂರು ಸಾಲುಗಳ ತ್ರಿಪದಿಗಳಲ್ಲಿ ಸಮಾಜದ ಅಂಕುಡೊಂಕುಗಳನ್ನು ನಿರ್ಭೀತಿಯಿಂದ ಪ್ರಸ್ತುತ ಪಡಿಸಿದ್ದಾರೆ. ಸರ್ವಜ್ಞನ ಈ ತ್ರಿಪದಿಗಳನ್ನು ರಾಜ್ಯದ ಜನತೆ ತಪ್ಪದೆ ಓದಬೇಕು. ಇದರಿಂದ ಸಮಾಜದಲ್ಲಿ ನಡೆಯುವ ಸರಿತಪ್ಪುಗಳ ಕುರಿತು ತಿಳುವಳಿಕೆ ಮೂಡುತ್ತದೆ ಎಂದು ಸಚಿವೆ ಉಮಾಶ್ರೀ ತಿಳಿಸಿದರು.
ರಾಜ್ಯದಲ್ಲಿ ಜನಿಸಿದ್ದ ಕವಿ, ಸಂತರು ಹಾಗೂ ಸಾಧಕರ ಜನ್ಮದಿನಾಂಕವನ್ನು ಒಳಗೊಂಡ ಕ್ಯಾಲೆಂಡರ್‌ನ್ನು ಪ್ರತಿವರ್ಷ ಬಿಡುಗಡೆ ಮಾಡುವಂತಹ ಯೋಜನೆಯನ್ನು ರೂಪಿಸಲಾಗುತ್ತಿದೆ. ಹಾಗೂ ಸಾಧಕರ ಜೀವನ ಚರಿತ್ರೆ ಕುರಿತು ಕೈಪಿಡಿಗಳನ್ನು ಹೊರ ತರಲಾಗುತ್ತಿದೆ.
ಕವಿ, ಸಂತರು ಹಾಗೂ ಸಮಾಜ ಸುಧಾರಕರು ಯಾವುದೆ ಜಾತಿ ಧರ್ಮಕ್ಕೆ ಸೀಮಿತವಾಗಬಾರದು. ಅದಕ್ಕಾಗಿಯೆ ಈ ಬಾರಿ ಸರಕಾರದ ವತಿಯಿಂದಲೆ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಅದೇ ಮಾದರಿಯಲ್ಲಿ ಸರ್ವಜ್ಞ, ಕನಕದಾಸ, ಅಕ್ಕಮಹಾದೇವಿ, ಬಸವಣ್ಣನ ಜಯಂತಿ ಯನ್ನು ಆಚರಿಸಲಾಗುವುದೆಂದು ಅವರು ತಿಳಿಸಿದರು.
ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಮಾತನಾಡಿ, ರಾಜ್ಯದಲ್ಲಿರುವ ಪ್ರತಿ ವಿಶ್ವವಿದ್ಯಾನಿಲಯವು ಒಬ್ಬ ಕವಿ, ಸಂತರ ಜನ್ಮ ವರ್ಷಾಚರಣೆಯನ್ನು ಮಾಡಬೇಕು. ಹಾಗೂ ಆ ಕವಿಯ ಕುರಿತು ಸಂಶೋಧನೆ, ಪುಸ್ತಕ ಬಿಡುಗಡೆ ಸೇರಿದಂತೆ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.
ಇಂದಿನ ಕಂಪ್ಯೂಟರ್ ಯುಗದಲ್ಲಿ ಕನ್ನಡ ಕಂಗ್ಲಿಷ್ ಆಗುತ್ತಿದೆ. ಇದರಿಂದ ವಚನಗಳು, ತ್ರಿಪದಿಗಳು ಕಣ್ಮರೆಯಾಗುವ ಅಪಾಯವಿದೆ. ಹೀಗಾಗಿ ಕವಿ, ಸಂತರ ಹಾಗೂ ಸಾಧಕರ ಚರಿತ್ರೆಗಳನ್ನು ವೆಬ್‌ಸೈಟ್‌ನಲ್ಲಿ ಅಳವಡಿಸುವಂತಹ ಕೆಲಸವಾಗಬೇಕು. ಆ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸುವಂತಹ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕೆಂದು ಅನಂತ ಕುಮಾರ್ ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಮತ್ತು ಯೋಜನಾ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಕನ್ನಡ ನಾಡಿನಲ್ಲಿ ಜನಿಸಿದ ಸಾಧು, ಸಂತರ ಜಯಂತಿಗಳನ್ನು ಆಚರಿಸುವುದರ ಮೂಲಕ ಕನ್ನಡ ಹಿರಿಮೆಯನ್ನು ಯುವಜನತೆಗೆ ತಲುಪಿಸುವಂತಹ ಕೆಲಸ ಮಾಡಲಾಗುತ್ತಿದೆ. ಸರ್ವಜ್ಞನ ತ್ರಿಪದಿಗಳನ್ನು ಪ್ರತಿಯೊಬ್ಬರು ಅಧ್ಯಯನ ಮಾಡುವುದರ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ್, ಪ್ರೊ.ಸ್ವಾಮಿನಾಥ ಕುಲಕರ್ಣಿ, ಸೌಂದರ್ಯ ಪಿ.ಮಂಜಪ್ಪ, ಸಿದ್ಧನಂಜಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.