ಮೇಲ್ಸೇತುವೆ ಪಕ್ಕದಲ್ಲಿಯೇ ಉದ್ಯಾನವನ ನಿರ್ಮಾಣ: ಸಚಿವ ಸದಾನಂದಗೌಡ

Update: 2016-02-20 18:08 GMT

ಬೆಂಗಳೂರು, ಫೆ. 20: ಬಿಬಿಎಂಪಿ ವ್ಯಾಪ್ತಿಯ ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಿರ್ಮಿಸಿರುವ ಮೇಲ್ಸೇತುವೆ ಪಕ್ಕದಲ್ಲಿಯೇ ಉದ್ಯಾನವನ ನಿರ್ಮಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಸದಾನಂದಗೌಡ ಭರವಸೆ ನೀಡಿದ್ದಾರೆ.
ಇಲ್ಲಿನ ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ 1ನೆ ಬ್ಲಾಕ್‌ನಲ್ಲಿ ನಿರ್ಮಿಸಿರುವ ಮೇಲ್ಸೇತುವೆ ಕಾಮಗಾರಿಯನ್ನು ಕೇಂದ್ರ ಕಾನೂನು ಸಚಿವ ಸದಾನಂದಗೌಡ ತಪಾಸಣೆ ನಡೆಸಿದರು.

ಇದೇ ವೇಳೆ ಸ್ಥಳೀಯ ನಿವಾಸಿಗಳು ಮೇಲ್ಸೇತುವೆ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವುದು ಬೇಡವೆಂದು ಆಗ್ರಹಿಸಿ, ಈಗಿರುವ ಉದ್ಯಾನವನವನ್ನು ಹಾಗೇ ಉಳಿಸಿಕೊಳ್ಳಬೇಕೆಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು. ಈ ಬಗ್ಗೆ ಸ್ಪಂದಿಸಿದ ಸಚಿವರು, ಮೇಲ್ಸೇತುವೆ ಕಾಮಗಾರಿಗೆ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸುಮಾರು 27 ಕೋಟಿ ರೂ. ಮೀಸಲಿಟ್ಟದ್ದು, ಅದರಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿ ಕಾರ್ಯ ಸಂಪೂರ್ಣಗೊಳಿಸಲಾಗಿದೆ.
  ಶಾಸಕ ಗೋಪಾಲಯ್ಯ, ಸ್ಥಳೀಯ ಪಾಲಿಕೆ ಸದಸ್ಯ ಬಿ.ಭದ್ರೇಗೌಡ ಹಾಗೂ ಅಧಿಕಾರಿಗಳ ಮೂಲಕ 4 ಕೋಟಿ ರೂ.ಗಳಲ್ಲಿ ಈ ಪ್ರದೇಶ ಅಭಿವೃದ್ಧಿಗೊಳಿಸುವಂತೆ ಮನವಿ ಮಾಡಿದ್ದೆ. ಅದರಂತೆ, ಸ್ಕೈ-ವಾಕ್‌ನ್ನು ಲಿಫ್ಟ್ ಸಮೇತ ಅಭಿವೃದ್ಧಿ ಪಡಿಸಿ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಕ್ರಮ ವಹಿಸಲಾಗುವುದು. ಅದೇ ರೀತಿ, ಸ್ಥಳದಲ್ಲಿ ಉತ್ತಮ ಮಟ್ಟದ ಉದ್ಯಾನವನವನ್ನು ನಿರ್ಮಾಣ ಮಾಡುವುದಾಗಿ ಡಿವಿಎಸ್ ತಿಳಿಸಿದರು.
ಇದೇ ವೇಳೆ, ಸರ್ವೀಸ್ ರಸ್ತೆಯ ಬಗ್ಗೆ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ತಪಾಸಣೆಯಲ್ಲಿ ಶಾಸಕ ಗೋಪಾಲಯ್ಯ, ಉಪ ಮೇಯರ್‌ಎಸ್.ಪಿ.ಹೇಮಲತಾ, ಸ್ಥಳೀಯ ಪಾಲಿಕೆ ಸದಸ್ಯರಾದ ಬಿ.ಭದ್ರೇಗೌಡ, ರಾಜೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News