ಒಂದು ಭಾಷೆಯ ಸಮೃದ್ಧಿಗೆ ಎಲ್ಲ ಭಾಷೆಯ ಪದಗಳು ಅಗತ್ಯ: ಸಿದ್ದರಾಮಯ್ಯ

Update: 2016-02-21 18:12 GMT

‘ಬೆಂಗಳೂರು ದರ್ಶನ’ ಗ್ರಂಥ ಲೋಕಾರ್ಪಣೆ
ಬೆಂಗಳೂರು, ಫೆ. 21: ಯಾವುದೇ ಭಾಷೆ ಸಮೃದ್ಧಗೊಳ್ಳಬೇಕಾದರೆ ಆ ಭಾಷೆಗೆ ಎಲ್ಲ ಭಾಷೆಗಳ ಪದಗಳು ಒಗ್ಗೂಡಬೇಕು. ಆಗ ಮಾತ್ರ ಎಲ್ಲ ಭಾಷೆಗಳು ಜೀವಂತವಾಗಿರಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರವಿವಾರ ಉದಯಬಾನು ಕಲಾಸಂಘ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ‘ಬೆಂಗಳೂರು ದರ್ಶನ’ ಗ್ರಂಥವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ಯಾವ ಭಾಷೆಯೂ ನೂರು ನೂರರಷ್ಟು ಶುದ್ಧವಾಗಿರುವುದಿಲ್ಲ. ಎಲ್ಲ ಭಾಷೆಗಳಿಗೂ ಇತರ ಭಾಷೆಯ ಪದಗಳು ಸೇರಿಕೊಂಡಿರುತ್ತವೆ. ಹೀಗಾಗಿ ಕನ್ನಡವನ್ನು ಆದ್ಯತೆ ಮೇರಿಗೆ ಬೆಳೆಸುವಂತಹ ಸಂಕಲ್ಪವನ್ನು ಕನ್ನಡಿಗರು ಮಾಡಬೇಕು. ಇದಕ್ಕೆ ಸಂಘ, ಸಂಸ್ಥೆಗಳು ಕೈಜೋಡಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
  ಉದಯಬಾನು ಕಲಾಸಂಘ ವತಿಯಿಂದ ಬಿಡುಗಡೆಗೊಂಡಿರುವ ‘ಬೆಂಗಳೂರು ದರ್ಶನ’ ಕೃತಿಯನ್ನು ಒಂದು ಸಾವಿರ ಪ್ರತಿಗಳನ್ನು ಸರಕಾರದ ವತಿಯಿಂದ ಕೊಂಡುಕೊಳ್ಳಲಾಗುತ್ತದೆ ಹಾಗೂ ಉದಯಬಾನು ಸಂಘದ ಬೆಳವಣಿಗೆಗೆ ಅಗತ್ಯವಿರುವ ಎಲ್ಲ ನೆರವನ್ನೂ ಸರಕಾರ ನೀಡಲಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಉದಯಭಾನು ಕಲಾಸಂಘ ಹೊರ ತಂದಿರುವ ‘ಬೆಂಗಳೂರು ದರ್ಶನ’ 3 ಸಂಪುಟಗಳ ಗ್ರಂಥ ಜಾಗತಿಕ ದಾಖಲೆಯಾಗಿದೆ. ಜಗತ್ತಿನ ಯಾವುದೇ ರಾಜಧಾನಿಯ ಕುರಿತು ಈ ರೀತಿಯ ಗ್ರಂಥ ಹೊರಬಂದಿಲ್ಲ ಎಂದನಿಸುತ್ತದೆ. ಬೆಂಗಳೂರಿನ ಆಡಳಿತ ಪ್ರತಿನಿಧಿಗಳಿಗೆ ಇದು ಮಾದರಿ ಗ್ರಂಥ ಎಂದು ಅಭಿಪ್ರಾಯಪಟ್ಟರು. ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ವಿಶೇಷ ಕನ್ನಡ ಅಭಿಯಾನ ಆಗಬೇಕಾಗಿದೆ. ಇಲ್ಲಿ ಪ್ರತಿಯೊಬ್ಬರೂ ಕನ್ನಡವನ್ನು ಕಂಗ್ಲಿಷ್‌ಗೊಳಿಸಿ ಮಾತನಾಡಲು ಬಯಸುತ್ತಾರೆ. ಈ ರೀತಿಯ ಬೆಳವಣಿಗೆ ಕನ್ನಡ ಭಾಷಾ ಸಂಸ್ಕೃತಿಗೆ ಭಾರೀ ಅಪಾಯವಾಗಲಿದೆ. ಹೀಗಾಗಿ ರಾಜಧಾನಿಯಲ್ಲಿ ಬೆಂಗಳೂರನ್ನು ಉಳಿಸುವತ್ತ ಹೆಚ್ಚಿನ ಆದ್ಯತೆ ವಹಿಸಬೇಕೆಂದು ಅವರು ತಿಳಿಸಿದರು.

ಕನ್ನಡ ಉಳಿಯಬೇಕಾದರೆ ಗಣಕೀಕೃತ, ವಿದ್ಯುನ್ಮಾನ ಹಾಗೂ ಅಂತರ್ಜಲದಲ್ಲಿ ಕನ್ನಡ ಬಳಕೆಯಾಗಬೇಕು. ಈ ಬಗ್ಗೆ ಉದಯಬಾನು ಕಲಾಸಂಘ ಸಂಶೋಧನೆ ನಡೆಸಬೇಕು. ಈ ರೀತಿ ಸಂಶೋಧನೆ ನಡೆಸಲು ಉದಯಬಾನು ಕಲಾ ಸಂಘಕ್ಕೆ ಲೋಕಸಭಾ ಸದಸ್ಯ ನಿಧಿಯಿಂದ 25 ಲಕ್ಷ ರೂ. ನೀಡಲಾಗುವುದು ಎಂದು ತಿಳಿಸಿದರು. ಈ ವೇಳೆ ಪ್ರೊ.ಎಂ.ಎಚ್.ಕೃಷ್ಣಯ್ಯ ಹಾಗೂ ಡಾ.ವಿಜಯಾ ಸಂಪಾದಿಸಿರುವ ಬೆಂಗಳೂರು ದರ್ಶನ, ಉದಯಬಾನು ರತ್ನ ಮತ್ತು ಸುವರ್ಣ ವಿಕಾಸ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಡಾ.ಎಂ.ಎನ್.ವೆಂಕಟಾಚಲಯ್ಯ, ಎ.ಜೆ.ಸದಾಶಿವ, ಕವಿ ಡಾ.ಸಿದ್ದಲಿಂಗಯ್ಯ, ಶಾಸಕ ರವಿ ಸುಬ್ರಹ್ಮಣ್ಯ, ಕರ್ನಾಟಕ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News