×
Ad

‘ಸ್ವದೇಶಿ ರಾಕೆಟ್ ಉಡಾವಣೆಗೆ ಇಸ್ರೋ ಗುರಿ’

Update: 2016-02-22 23:41 IST

ಬೆಂಗಳೂರು, ಫೆ. 22: ಇಸ್ರೋ ಸಂಸ್ಥೆ ಸ್ವದೇಶಿ ಉಪಗ್ರಹ ಉಡಾವಣೆ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿದ್ದು, 2020ರ ವೇಳೆಗೆ ಇನ್ನಷ್ಟು ಸ್ವದೇಶಿ ನಿರ್ಮಿತ ರಾಕೆಟ್‌ಗಳನ್ನು ಉಡಾವಣೆ ಮಾಡುವ ಗುರಿಯಿದೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಬಿಎಫ್‌ಡಬ್ಲೂ ಸಂಶೋಧನೆ ಮತ್ತು ಅಭಿವೃದ್ಧಿ ಡಾ.ಕಲಾಂ ಅನ್ವೇಷಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಬ್ದುಲ್ ಕಲಾಂ ಅವರು ಅತ್ಯಂತ ವಿರಳ ವ್ಯಕ್ತಿತ್ವದ ನಾಯಕ. ಧಾರ್ಮಿಕತೆ ಮತ್ತು ವಿಜ್ಞಾನ ಎರಡನ್ನೂ ಒಟ್ಟಾಗಿ ಮೈಗೂಡಿಸಿಕೊಂಡ ಶೇಷ್ಠ ವಿಜ್ಞಾನಿಯಾಗಿದ್ದರು. ಅವರ ಹೆಸರಿನಲ್ಲಿ ಅನ್ವೇಷಣಾ ಕೇಂದ್ರ ಸ್ಥಾಪನೆಯಾಗುತ್ತಿರುವುದು ಶ್ಲಾಘನೀಯ ಎಂದರು.
 ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೊಸ ಹೊಸ ತಂತ್ರಜ್ಞಾನ ಬರುತ್ತಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡರೆ ಕ್ಷೀಪ್ರ ಗತಿಯಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ ಅವರು, ಇಸ್ರೋ ಮೊದಲ ಬಾರಿಗೆ 1963ರಲ್ಲಿ ರಾಕೆಟ್ ಉಡಾವಣೆ ಮಾಡಿತು. ಆ ಬಳಿಕ ಬೇರೆ ಬೇರೆ ದೇಶಗಳ ಉಪಗ್ರಹಗಳನ್ನು ನಮ್ಮ ಉಡಾವಣಾ ಕೇಂದ್ರದಲ್ಲಿ ಉಡಾವಣೆ ಮಾಡಿದೆ ಎಂದು ಕೊಂಡಾಡಿದರು
ಪ್ರತಿವರ್ಷ 2 ರಾಕೆಟ್ ಉಡಾವಣೆಗೆ ಇಸ್ರೋ ನಿರ್ಧರಿಸಿದ್ದು, 2020ರ ವೇಳೆಗೆ ಇನ್ನಷ್ಟು ಸಾಧನೆ ಮಾಡುವ ಗುರಿ ಹೊಂದಲಾಗಿದೆ. ಮುಖ್ಯವಾಗಿ ಆರೋಗ್ಯ, ಶಿಕ್ಷಣ, ಸಂವಹನ, ಹವಾಮಾನ, ಕೈಗಾರಿಕೆಗಳಿಗೆ ಅಗತ್ಯವಿರುವ ಉಪಗ್ರಹಗಳನ್ನು ಉಡಾವಣೆ ಮಾಡಲು ಇಸ್ರೋ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಎಫ್‌ಡಬ್ಲೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ರಾಘವನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News