‘ಡಿ’ ದರ್ಜೆ ನೌಕರರು ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ
ಸಚಿವ ಸಂಪುಟ ಸಭೆಯ ಮಹತ್ವದ ನಿರ್ಧಾರ
ಬೆಂಗಳೂರು, ಫೆ. 22: ‘ಡಿ’ದರ್ಜೆ ಸರಕಾರಿ ಖಾಯಂ ನೌಕರರು ಇನ್ನು ಮುಂದೆ ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ವಿವರಗಳನ್ನು ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸುವುದು ಕಡ್ಡಾಯಗೊಳಿಸಿ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ರಾಜ್ಯ ನಾಗರಿಕ ಸೇವೆಗಳ ಕಾಯ್ದೆಯಡಿ ‘ಡಿ’ ದರ್ಜೆಯ ಸರಕಾರಿ ಖಾಯಂ ನೌಕರರು ಆಸ್ತಿ ವಿವರ ಸಲ್ಲಿಸುವ ತೀರ್ಮಾನ ಕೈಗೊಳ್ಳಲಾಗಿದೆ.
2015-16ನೆ ಸಾಲಿನ ಬಜೆಟ್ ಘೋಷಣೆಯಂತೆ ಬೋವಿ ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದ್ದು, ಇದಕ್ಕಾಗಿ 25 ಕೋಟಿ ರೂ. ಮೀಸಲಿರಿಸಿದೆ.
ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಎಸ್.ಜಗದೀಶ್ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಹಲ್ಲೆಗೊಳಗಾಗಿ ಮರಣ ಹೊಂದಿದ ಕಾರಣ ಅವರ ಪತ್ನಿ ಎನ್.ರಮ್ಯಾ ಅವರಿಗೆ ಅನುಕಂಪದ ಆಧಾರದ ಮೇಲೆ ಸಬ್ ರಿಜಿಸ್ಟ್ರಾರ್ ಹುದ್ದೆ ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಸಿಯಾಚಿನ್‌ನಲ್ಲಾದ ಹಿಮಪಾತದ ಅವಘಡ ದಿಂದ ಮೃತಪಟ್ಟ ರಾಜ್ಯದ ಯೋಧರ ಕುಟುಂಬದ ಅವಲಂಬಿತರಿಗೆ ತಲಾ 25 ಲಕ್ಷ ರೂ.ಪರಿಹಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದಂತಹ ಇನ್ನಿತರ ಸೌಲಭ್ಯ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇದಲ್ಲದೆ, ಇತ್ತೀಚೆಗೆ ಹುತಾತ್ಮರಾದ ವಿಜಯಪುರ ಜಿಲ್ಲೆಯ ಯೋಧ ಸಹದೇವ್ ಮೋರೆ ಅವರಿಗೂ 25 ಲಕ್ಷ ರೂ.ಪರಿಹಾರ ನೀಡಲು ನಿರ್ಧರಿಸಲಾಗಿದೆ.
2015-16ನೆ ಸಾಲಿನಲ್ಲಿ ರಾಜ್ಯದ 20 ಜಿಲ್ಲಾ ಕಾರಾಗೃಹಗಳಲ್ಲಿ ಸಿಸಿಟಿವಿ ಕ್ಯಾಮರಾ ಗಳನ್ನು 17.44 ಕೋಟಿ ರೂ.ಅಂದಾಜು ಮೊತ್ತದಲ್ಲಿ ಅಳವಡಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮೀನುಗಾರಿಕೆ ಇಲಾಖೆಯಿಂದ ಸಾಧ್ಯತಾ ಪತ್ರ ಪಡೆಯದೆ ಅಕ್ರಮವಾಗಿ ನಿರ್ಮಿಸಿರುವ 241 ಮೀನುಗಾರಿಕೆ ದೋಣಿಗಳನ್ನು ಸಕ್ರಮಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ. ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಆಶ್ರಯ ಯೋಜನೆಯಡಿ ಬೆಂಗಳೂರು ನಗರದಲ್ಲಿ ವಾಸ ಮಾಡುತ್ತಿರುವ ಪೌರ ಕಾರ್ಮಿಕರು ಹಾಗೂ ದಿನಗೂಲಿ ಕೆಲಸ ಮಾಡುತ್ತಿರುವ ಬಡವರಿಗೆ ಉಚಿತವಾಗಿ ನಿವೇಶನ ಹಂಚಲು ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಆಲೂರು ಗ್ರಾಮದ ಸರ್ವೆ ನಂ.25ರಲ್ಲಿ 14.09 ಎಕರೆ ಮತ್ತು ಹುಣ್ಣಗೆರೆ ಗ್ರಾಮದ ಸರ್ವೆ ನಂ.34ರಲ್ಲಿ 5 ಎಕರೆ(ಒಟ್ಟು 19.09 ಎಕರೆ) ಸರಕಾರಿ ಜಮೀನನ್ನು ಉಚಿತವಾಗಿ ಮಂಜೂರು ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಆಶ್ರಯ ಯೋಜನೆಯಡಿಯಲ್ಲಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ತಮ್ಮೇನಹಳ್ಳಿ ಗ್ರಾಮದ ಸರ್ವೆ ನಂ.19ರಲ್ಲಿ 5.37 ಎಕರೆ ಸರಕಾರಿ ಜಮೀನನ್ನು ಉಚಿತವಾಗಿ ಮಂಜೂರು ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಚಾಮರಾಜನಗರ(ಬದನಕುಪ್ಪೆ) ಹಾಗೂ ಯಾದಗಿರಿ (ಕಡೇಚೂರು) ಕೈಗಾರಿಕಾ ಪ್ರದೇಶಗಳ ಮೂಲಸೌಲಭ್ಯ ಅಭಿವೃದ್ಧಿ ಕೆಲಸಗಳಿಗಾಗಿ ಕ್ರಮವಾಗಿ 82 ಕೋಟಿ ರೂ.ಹಾಗೂ 50 ಕೋಟಿ ರೂ.ಅನುದಾನ ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಮೊದಲ ಹಂತವಾಗಿ ಚಾಮರಾಜ ನಗರಕ್ಕೆ 30 ಕೋಟಿ ರೂ.ಹಾಗೂ ಯಾದಗಿರಿಗೆ 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಕ್ಕೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಸಬಾ ಹೋಬಳಿಯಲ್ಲಿರುವ ಯಲಗಳಲೆ ಗ್ರಾಮದ ವಿವಿಧ ಸರ್ವೆ ನಂಬರುಗಳಲ್ಲಿ ಒಟ್ಟು 18 ಎಕರೆ ಜಮೀನನ್ನು ಕೈಗಾರಿಕಾ ವಸಾಹತು ಸ್ಥಾಪಿಸುವ ಉದ್ದೇಶಕ್ಕಾಗಿ ಮಂಜೂರು ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಡಾ.ಬಾಬು ಜಗಜೀವನರಾಂ ಭವನ ನಿರ್ಮಿಸಲು ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿದ ಶ್ರೀಗಂಧದಕಾವಲು ಸರ್ವೆ ನಂ.60/15ರಲ್ಲಿ ಹೆಚ್ಚುವರಿಯಾಗಿ 3 ಎಕರೆ ಜಮೀನನ್ನು ಮಂಜೂರು ಮಾಡಲು ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ 8 ಸಣ್ಣ ನೀರಾವರಿ ಕೆರೆಗಳಿಗೆ ಸಂಖ್ ಲಿಫ್ಟ್ ಮುಖಾಂತರ(ಪ್ಯಾಕೇಜ್-4) ಭೀಮಾ ನದಿಯಿಂದ ನೀರು ತುಂಬಿಸುವ ಯೋಜನೆಯ 63.98 ಕೋಟಿ ರೂ.ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ 8 ಸಣ್ಣ ನೀರಾವರಿ ಕೆರೆಗಳಿಗೆ ಬುಯ್ಯರ್ ಲಿಫ್ಟ್ ಮುಖಾಂತರ (ಪ್ಯಾಕೇಜ್-6) ಭೀಮಾ ನದಿಯಿಂದ ನೀರು ತುಂಬಿಸುವ ಯೋಜ ನೆಯ 68 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
2015-16ನೆ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಡಿ 37 ಸರಕಾರಿ ಐಟಿಐ ಕಾಲೇಜುಗಳಲ್ಲಿ 11.70 ಕೋಟಿ ರೂ.ವೆಚ್ಚದಲ್ಲಿ ಡಿಜಿಟಲ್ ವಾಚನಾಲಯ ಸ್ಥಾಪಿಸುವುದು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ಜೋಳಕ್ಕೆ 220 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, 100 ಕೋಟಿ ರೂ.ಸಾಲ ಎತ್ತಲು ಸರಕಾರಿ ಖಾತ್ರಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕಬ್ಬನ್‌ಪಾರ್ಕ್‌ನಲ್ಲಿ ಹೊಸದಾಗಿ ದಿನಂಪತ್ರಿ 2 ದಶಲಕ್ಷ ಲೀಟರ್ ಸಾಮರ್ಥ್ಯದ ತೃತೀಯ ಹಂತದ ತ್ಯಾಜ್ಯನೀರಿನ ಶುದ್ಧೀಕರಣ ಘಟಕದ ನಿರ್ಮಾಣ ಹಾಗೂ ಹಾಲಿ ಇರುವ ತ್ಯಾಜ್ಯನೀರಿನ ಶುದ್ಧೀಕರಣ ಘಟಕದ ಸಾಮರ್ಥ್ಯವನ್ನು ದಿನಂಪತ್ರಿ 1.50 ಲಕ್ಷ ಲೀಟರ್ ಸಾಮರ್ಥ್ಯದಿಂದ 2 ದಶಲಕ್ಷ ಲೀಟರ್ ಸಾಮರ್ಥ್ಯಕ್ಕೆ ಹೆಚ್ಚಿಸುವ ಕಾಮಗಾರಿ ಮತ್ತು ಐದು ವರ್ಷಗಳ ಚಾಲನೆ ಹಾಗೂ ನಿರ್ವಹಣೆಯ ಒಟ್ಟು 28.63 ಕೋಟಿ ರೂ.ಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.