×
Ad

ಪರ್ಯಾಯ ಮಾರ್ಗಕ್ಕಾಗಿ ಮುಖ್ಯಮಂತ್ರಿ ಸೂಚನೆ

Update: 2016-02-22 23:45 IST

ಬೆಂಗಳೂರು, ಫೆ.22: ರಾಜ್ಯದಲ್ಲಿ ಮುಂದಿನ ಬೇಸಿಗೆ ವೇಳೆಗೆ ಎದುರಾಗಲಿರುವ ವಿದ್ಯುತ್ ಸಮಸ್ಯೆಗೆ ಪರ್ಯಾಯ ಮಾರ್ಗೋಪಾಯಗಳನ್ನು ಕಂಡು ಹಿಡಿಯುವಂತೆ ಮುಖ್ಯಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಸಂದರ್ಭದಲ್ಲಿ ರಾಜ್ಯದ ವಿದ್ಯುತ್ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ, ಶರಾವತಿ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ದುರಂತದಿಂದಾಗಿ ವಿದ್ಯುತ್ ಪೂರೈಕೆ ಮೇಲೆ ಬೀರಿರುವ ಪರಿಣಾಮದ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
 ಶರಾವತಿಯ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ದುರಂತದಿಂದಾಗಿ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ನಷ್ಟವಾಗಿದೆ. ಶರಾವತಿಯ ಘಟಕವನ್ನು ಪುನರ್ ಆರಂಭಿಸಲು ಕನಿಷ್ಠ 4-5 ತಿಂಗಳುಗಳ ಕಾಲಾವಕಾಶದ ಅಗತ್ಯವಿದೆ. ಅದೇ ರೀತಿ ಗ್ರೀಡ್ ಸಮಸ್ಯೆ ಇರುವುದರಿಂದ 500 ಮೆಗಾವ್ಯಾಟ್ ಕೊರತೆಯಿದೆ. ಒಟ್ಟಾರೆ ರಾಜ್ಯಕ್ಕೆ 1500 ಮೆಗಾವ್ಯಾಟ್‌ನಷ್ಟು ವಿದ್ಯುತ್ ಕೊರತೆ ಉಂಟಾಗಲಿದೆ.
ಬೆಳಗ್ಗೆ 7-9 ಗಂಟೆಯವರೆಗೆ ಸಾರ್ವಜನಿಕರು ಹಾಗೂ ರೈತರಿಗೆ ತ್ರೀ ಫೇಸ್ (ಗುಣಮಟ್ಟದ) ವಿದ್ಯುತ್ ಪೂರೈಕೆ ಮಾಡಲು ಇಂಧನ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ರಾಜ್ಯದ ಜನತೆ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆಯನ್ನು ಎದುರಿಸಲು ಸಜ್ಜಾಗಬೇಕಿದೆ.
ಮಾರ್ಚ್ ತಿಂಗಳಲ್ಲಿ 10,026 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯ ಅಂದಾಜಿದ್ದು, 9,218 ಮೆಗಾವ್ಯಾಟ್ ಮಾತ್ರ ಲಭ್ಯವಾಗಲಿದೆ. ಎಪ್ರಿಲ್ ತಿಂಗಳಲ್ಲಿ 10,453 ಮೆಗಾವ್ಯಾಟ್ ಬೇಡಿಕೆ ಅಂದಾಜಿದ್ದು, 9,762 ಲಭ್ಯವಾಗುವ ನಿರೀಕ್ಷೆಯಿದೆ. ಅದೇ ರೀತಿ ಮೇ ತಿಂಗಳಲ್ಲಿ 9,183 ಮೆಗಾವ್ಯಾಟ್ ಬೇಡಿಕೆ ಬರುವ ಸಾಧ್ಯತೆಯಿದ್ದು, 9,156 ಮೆಗಾವ್ಯಾಟ್ ವಿದ್ಯುತ್ ಸಿಗುವ ಮೂಲಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News