1.77 ಲಕ್ಷ ಕೋಟಿ ರೂ. ಹೂಡಿಕೆಯ 122 ಒಪ್ಪಂದಗಳಿಗೆ ಸಹಿ: ಸಚಿವ ದೇಶಪಾಂಡೆ

Update: 2016-02-22 18:17 GMT


ಒಡಂಬಡಿಕೆಗಳು ಮೇ 15ರೊಳಗೆ ಕಾರ್ಯರೂಪಕ್ಕೆ
ಹೂಡಿಕೆಗೆ ಭೂಮಿ-ಇಂಧನ ಸಮಸ್ಯೆ ಇಲ್ಲ
ಯೋಜನೆಗಳ ಅನುಮೋದನೆಗೆ ಪ್ರತ್ಯೇಕ ‘ಸಾಫ್ಟ್‌ವೇರ್’
ಎರಡನೆ ದರ್ಜೆ ನಗರಗಳಲ್ಲಿ ಹೂಡಿಕೆಗೆ ಆದ್ಯತೆ

ಬೆಂಗಳೂರು, ಫೆ. 22: ‘ಇನ್ವೆಸ್ಟ್-ಕರ್ನಾಟಕ’ ಹೂಡಿಕೆದಾರರ ಸಮಾವೇಶದಲ್ಲಿ ಒಟ್ಟು 1.77ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆಯ 1,080 ಯೋಜನೆಗಳ 122 ಎಂಒಯುಗಳಿಗೆ ಸಹಿ ಹಾಕಿದ್ದು, 4.82 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡವಾಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡಿರುವ ಉದ್ಯಮಿಗಳು, 2016ರ ಮೇ 15ರೊಳಗೆ ಅವು ಕಾರ್ಯರೂಪಕ್ಕೆ ಬರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
 ಕೃಷಿ, ಆಹಾರ, ಏರೋಸ್ಪೇಸ್, ಆಟೋ ಮೊಬೈಲ್, ಸಿಮೆಂಟ್, ಶಿಕ್ಷಣ, ಇಂಧನ, ಇಂಜಿ ನಿಯರಿಂಗ್, ಪ್ರವಾಸೋದ್ಯಮ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಆದ್ಯತಾ ವಲಯಗಳಲ್ಲಿ ಹೂಡಿಕೆಯಾಗಿದ್ದು, ಈ ಎಲ್ಲ ಪ್ರಸ್ತಾವನೆಗಳಿಗೆ ಏಕಗವಾಕ್ಷಿ ಅನುಮೋದನಾ ಸಮಿತಿ ಯೋಜನೆಗಳಿಗೆ ಅನುಮೋದನೆ ನೀಡಲಿದೆ ಎಂದು ಹೇಳಿದರು.
ಬೆಂಗಳೂರು ನಗರವನ್ನು ಹೊರತುಪಡಿಸಿ ರಾಜ್ಯದಲ್ಲಿ ದ್ವಿತೀಯ ದರ್ಜೆ ನಗರಗಳಾದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಮೈಸೂರು, ರಾಮನಗರ, ಶಿವಮೊಗ್ಗ, ಉಡುಪಿ, ಬೀದರ್, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೂಡಿಕೆಗೆ ಆದ್ಯತೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಉದ್ದಿಮೆ ಸ್ಥಾಪಿಸಲು ಭೂಮಿಯ ಸಮಸ್ಯೆ ಇಲ್ಲ. ಅಲ್ಲದೆ, ರಸ್ತೆ, ಸಾರಿಗೆ ಸಂಪರ್ಕ, ವಿದ್ಯುತ್, ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆ ಇಲ್ಲ. ಆದರೂ, ಹೂಡಿಕೆದಾರ ರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಮತ್ತಷ್ಟು ಮೂಲಸೌಕರ್ಯ ಅಭಿವೃದ್ಧಿಗೆ ಆಸ್ಥೆ ವಹಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಸಮಗ್ರ ಅಭಿವೃದ್ಧಿ, ನಿರುದ್ಯೋಗ ನಿವಾರಣೆ ಹಾಗೂ ಮೂಲಸೌಲಭ್ಯಗಳ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರಕಾರ ಫೆ.3ರಿಂದ ಮೂರು ದಿನಗಳ ಕಾಲ ನಡೆಸಿದ ‘ಇನ್ವೆಸ್ಟ್-ಕರ್ನಾಟಕ’ ಸಮಾವೇಶ ಯಶಸ್ವಿಯಾಗಿದೆ. ಹೂಡಿಕೆ ನಿರಂತರ ಪ್ರಕ್ರಿಯೆ. ಮುಂಬರುವ ದಿನಗಳಲ್ಲಿ ಇದರಿಂದ ಉತ್ತಮ ಫಲಿತಾಂಶ ಬರುವ ವಿಶ್ವಾಸವಿದೆ ಎಂದು ದೇಶಪಾಂಡೆ ತಿಳಿಸಿದರು.
ಸಾಫ್ಟ್‌ವೇರ್: ‘ಇನ್ವೆಸ್ಟ್-ಕರ್ನಾಟಕ’ ಹೂಡಿಕೆದಾರರ ಸಮಾವೇಶದಲ್ಲಿ ಎಂಒಯು ಆದ ಯೋಜನೆಗಳ ಅನುಮೋದನೆಗೆ ‘ಉದ್ಯೋಗ ಮಿತ್ರ’ದಡಿ ಪ್ರತ್ಯೇಕ ಸಾಫ್ಟ್‌ವೇರ್ ರೂಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದರಿಂದ ತ್ವರಿತಗತಿಯಲ್ಲಿ ಯೋಜನೆಗಳು ಅನುಷ್ಠಾನಗೊಳ್ಳಲಿವೆ. ಅಲ್ಲದೆ, ಪಾರದರ್ಶಕತೆ ಕಾಯ್ದುಕೊಳ್ಳಲು ಸಹಕಾರಿ ಎಂದು ಸ್ಪಷ್ಟಪಡಿಸಿದರು.
7 ರಾಷ್ಟ್ರಗಳ ಪಾಲುದಾರಿಕಾ ಪ್ರತಿನಿಧಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ 41 ಸಭೆ, ವಿಚಾರ ಸಂಕಿರಣ, ಸಂವಾದಗಳನ್ನು ನಡೆಸಲಾಗಿದೆ. ಸಮಾವೇಶ ಯಶಸ್ವಿಗೆ ಸಹಕರಿಸಿದ ಉದ್ಯಮಿಗಳು, ಕೇಂದ್ರ ಸಚಿವರು, ಸಿಎಂ ಸಿದ್ದರಾಮಯ್ಯ, ಸಚಿವರು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪಾಲುದಾರರಿಗೆ ದೇಶಪಾಂಡೆ ಅಭಿನಂದನೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News