ಇಂದು ಜಿಪಂ-ತಾಪಂ ಫಲಿತಾಂಶ

Update: 2016-02-22 18:41 GMT

ಬೆಂಗಳೂರು, ಫೆ.22: ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯೆಂದೇ ವಿಶ್ಲೇಷಿಸಲಾಗುತ್ತಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ್ಯ ನಾಳೆ(ಫೆ.23) ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು ಮಧ್ಯಾಹ್ನ 12 ಗಂಟೆಯ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ.

ಮೂವತ್ತು ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸ್ಥಾನಗಳಿಗೆ ಎರಡು (ಫೆ.13, 20) ಹಂತಗಳಲ್ಲಿ ಚುನಾವಣೆ ನಡೆಸಲಾಗಿತ್ತು. ಆಯಾ ತಾಲೂಕು ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ರಾಜ್ಯ ಚುನಾ ವಣಾ ಆಯೋಗ ತಿಳಿಸಿದೆ.

ಪ್ರತಿ ತಾಲೂಕಿಗೆ ಒಂದರಂತೆ ರಾಜ್ಯಾದ್ಯಂತ ಒಟ್ಟು 176 ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಎಣಿಕಾ ಕೇಂದ್ರದಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ಆಗದಂತೆ ಎಣಿಕೆ ಕಾರ್ಯದ ವಿವರಗಳನ್ನು ಪ್ರಕಟಿಸಲು ಧ್ವನಿವರ್ಧಕಗಳನ್ನು ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ.

ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗೆ ಪ್ರತ್ಯೇಕ ಎಣಿಕೆ ಕಾರ್ಯ ನಡೆಯಲಿದ್ದು, ಜಿ.ಪಂ.ಸ್ಥಾನಗಳ ಮತ ಎಣಿಕೆಗೆ ಒಂದು ಕ್ಷೇತ್ರಕ್ಕೆ ಮೂರು ಮೇಜುಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲಿ ಒಬ್ಬ ಮೇಲ್ವಿಚಾರಕ, ಓರ್ವ ಸಹಾಯಕ ಹಾಗೂ ‘ಡಿ’ ದರ್ಜೆಯ ಓರ್ವ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಯೂ ಇರಲಿದ್ದಾರೆ.

ಅದೇ ಮಾದರಿಯಲ್ಲೆ ತಾಲೂಕು ಪಂಚಾಯತ್ ಎಣಿಕೆ ಕಾರ್ಯವೂ ನಡೆಯಲಿದೆ. ಜಿ.ಪಂ. ಮತ ಎಣಿಕೆ ಕಾರ್ಯವೂ ಐದರಿಂದ ಆರು ಸುತ್ತು ನಡೆಯಲಿದ್ದು, ತಾ.ಪಂ. ಮತ ಎಣಿಕೆ ಕಾರ್ಯ ಮೂರು ಸುತ್ತಿಗೆ ಸೀಮಿತವಾಗಿರುತ್ತದೆ. ಇದೇ ಮೊದಲ ಬಾರಿಗೆ ಮತ ಎಣಿಕೆ ಕಾರ್ಯ ಪೂರ್ಣಗೊಂಡ ಬಳಿಕ ಜಯಗಳಿಸಿದ ಅಭ್ಯರ್ಥಿಯನ್ನು ಪ್ರಕಟಿಸಿ ಪ್ರಮಾಣ ಪತ್ರ ನೀಡಲು ಆಯೋಗ ಸನ್ನದ್ಧವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News