ರಾಜ್ಯಕ್ಕೆ ನಿರಾಶೆ: ಸಿಎಂ
Update: 2016-02-25 23:32 IST
ಬೆಂಗಳೂರು, ಫೆ.25: ಕೇಂದ್ರ ರೈಲ್ವೆ ಸಚಿವ ಸುರೇಶ್‌ಪ್ರಭು ಮಂಡಿಸಿರುವ 1.21 ಲಕ್ಷ ಕೋಟಿ ರೂ.ಮೊತ್ತದ 2016-17ನೆ ಸಾಲಿನ ರೈಲ್ವೆ ಬಜೆಟ್ ರಾಜ್ಯದ ಪಾಲಿಗೆ ಅತ್ಯಂತ ನಿರಾಶಾದಾಯಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರಕಾರದ ಪಾಲು ದಾರಿಕೆಯಲ್ಲಿ ಕೈಗೆತ್ತಿಕೊಳ್ಳುವ ಬೆಂಗಳೂರು ಉಪನಗರ ರೈಲ್ವೆ ವ್ಯವಸ್ಥೆಯನ್ನು ಹೊರತುಪಡಿಸಿ, ರಾಜ್ಯಕ್ಕೆ ಯಾವುದೇ ಹೊಸ ಮಾರ್ಗಗಳನ್ನು ನೀಡಿಲ್ಲ ಎಂದು ಟೀಕಿಸಿದರು.
ರೈಲ್ವೆ ಬಜೆಟ್‌ಗೆ ಮುಂಚಿತವಾಗಿ ನಾವು ಕೇಂದ್ರ ಸಚಿವರಿಗೆ ಪತ್ರ ಬರೆದು, ರಾಜ್ಯಕ್ಕೆ ಅಗತ್ಯವಿರುವ ಹಲವಾರು ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಲಾಗಿತ್ತು. ಅಲ್ಲದೆ, ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಸುರೇಶ್‌ಪ್ರಭು ಆಗಮಿಸಿದ್ದ ವೇಳೆಯೂ ಅವರ ಗಮನ ಸೆಳೆಯಲಾಗಿತ್ತು ಎಂದು ಅವರು ಹೇಳಿದರು.