ಜಪಾನ್ ಜನಸಂಖ್ಯೆ 10 ಲಕ್ಷ ಕುಸಿತ

Update: 2016-02-26 15:07 GMT

ಟೋಕಿಯೊ, ಫೆ. 26: ಜಪಾನ್‌ನಲ್ಲಿ ಜನಸಂಖ್ಯೆ ಕುಸಿಯುತ್ತಿರುವುದು ಅಧಿಕೃತವಾಗಿ ಸಾಬೀತಾಗಿದೆ. ಈ ಮೊದಲು, ಮುಚ್ಚಿದ ಅಂಗಡಿಗಳು, ನಿರ್ಜನ ಗ್ರಾಮಗಳು ಮುಂತಾದ ಅದರ ಸೂಚನೆಗಳು ದೇಶಾದ್ಯಂತ ಗೋಚರಿಸಿದ್ದವು.

ಈಗ 2015ರ ಜನಗಣತಿಯ ಅಂಕಿಸಂಖ್ಯೆಗಳು ಶುಕ್ರವಾರ ಬಿಡುಗಡೆಗೊಂಡಿದ್ದು, ಜನಸಂಖ್ಯೆಯಲ್ಲಿ ಭಾರಿ ಕುಸಿತ ದಾಖಲಾಗಿದೆ.

ದೇಶದಲ್ಲಿ 12.71 ಕೋಟಿ ಜನರಿದ್ದಾರೆ ಎಂದು ಜನಗಣತಿ ಹೇಳಿದೆ. 2010ರಲ್ಲಿ ನಡೆದ ಜನಗಣತಿಯ ಪ್ರಕಾರ, ಜಪಾನ್‌ನಲ್ಲಿ 12.81 ಕೋಟಿ ಜನರಿದ್ದರು. ಅಂದರೆ, ಜಪಾನ್‌ನ ಜನಸಂಖ್ಯೆಯಲ್ಲಿ 9.47 ಲಕ್ಷ, ಅಂದರೆ 0.7 ಶೇಕಡದಷ್ಟು ಕುಸಿತವಾಗಿದೆ.

1920ರಲ್ಲಿ ಐದು ವರ್ಷಕ್ಕೊಮ್ಮೆ ಜನಗಣತಿ ಮಾಡುವ ಪದ್ಧತಿ ಆರಂಭವಾದಾಗಿನಿಂದ, ಜನಸಂಖ್ಯೆಯಲ್ಲಿ ಕುಸಿತ ದಾಖಲಾಗಿರುವುದು ಇದೇ ಮೊದಲ ಬಾರಿಯಾಗಿದೆ.

ಆರ್ಥಿಕ ಬೆಳವಣಿಗೆಯನ್ನು ಸಾಧಿಸುವುದಕ್ಕಾಗಿ ವಿಸ್ತರಿಸುವ ಮಾರುಕಟ್ಟೆ ಮತ್ತು ಕಾರ್ಮಿಕ ಶಕ್ತಿ ಬೇಕು. ಇವೆರಡರ ಕೊರತೆಯನ್ನು ಮನಗಂಡಿರುವ ಸರಕಾರ, ಕುಸಿಯುತ್ತಿರುವ ಜನನ ದರವನ್ನು ನಿಭಾಯಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಜನಸಂಖ್ಯೆ 10 ಕೋಟಿಗಿಂತ ಕೆಳಗಿಳಿಯದಂತೆ ತಡೆಯುವುದು ಮೊದಲ ಆದ್ಯತೆ ಎಂಬುದಾಗಿ ಪ್ರಧಾನಿ ಶಿಂರೊ ಅಬೆ ಸ್ಪಷ್ಟಪಡಿಸಿದ್ದಾರೆ. ಆದರೆ, ಜನನ ದರ ಪ್ರತಿ ಮಹಿಳೆಗೆ ಈಗಿನ 1.4ರಿಂದ ಅಬೆ ಅವರ ಗುರಿಯಾಗಿರುವ 1.8ಕ್ಕೆ ಏರಿದರೂ ಇದನ್ನು ತಡೆಯುವುದು ಅಸಾಧ್ಯ ಎಂದು ಜನಸಂಖ್ಯಾ ಪರಿಣತರು ಹೇಳುತ್ತಾರೆ.

ಟೋಕಿಯೊದ ನಿಬಿಡ ಅವಧಿಯ ರೈಲುಗಳು ಎಂದಿನಂತೆ ಈಗಲೂ ತುಂಬಿತುಳುಕುತ್ತಿವೆ. ಜಪಾನ್‌ನ ದೊಡ್ಡ ನಗರಗಳು ಬೆಳೆಯುತ್ತಲೇ ಇವೆ. ಇಲ್ಲಿಗೆ ಯುವ ಕೆಲಸಗಾರರು ಸಣ್ಣ ಪಟ್ಟಣಗಳಿಂದ ಕೆಲಸ ಹುಡುಕಿಕೊಂಡು ಬರುತ್ತಿದ್ದಾರೆ.

ರಾಜಧಾನಿ ಟೋಕಿಯೋದ ಜನಸಂಖ್ಯೆ 1.35 ಕೋಟಿಗೆ ಏರಿದೆ ಎಂದು ಗಣತಿ ತಿಳಿಸಿದೆ. 2010ರ ಗಣತಿಗೆ ಹೋಲಿಸಿದರೆ ಇದು 2.7 ಶೇಕಡದಷ್ಟು ಹೆಚ್ಚು.

ನಿರ್ಜನ ಗ್ರಾಮಗಳು, ಕಳೆ ಬೆಳೆದ ಹೊಲಗಳು...

ಆದರೆ, ಯಾವುದಾದರೂ ಪ್ರಾದೇಶಿಕ ನಗರಕ್ಕೆ ಭೇಟಿ ನೀಡಿದರೆ ಜನಸಂಖ್ಯಾ ಕುಸಿತದ ಪರಿಣಾಮ ಅನುಭವಕ್ಕೆ ಬರುತ್ತದೆ. ನಗರದ ಹೊರವಲಯದಲ್ಲಿರುವ ಎಲ್ಲ ಸಣ್ಣ ಅಂಗಡಿಗಳು ಮುಚ್ಚಿವೆ. ಅವುಗಳ ಮಾಲೀಕರು ಒಂದೋ ನಿವೃತ್ತರಾಗಿದ್ದಾರೆ ಅಥವಾ ಮೃತಪಟ್ಟಿದ್ದಾರೆ.

ಗ್ರಾಮೀಣ ಪ್ರದೇಶಗಳತ್ತ ಕಣ್ಣು ಹಾಯಿಸುವುದಾದರೆ, ಟೋಕಿಯೊ ನಗರದ ಹೊರಭಾಗದಲ್ಲಿರುವ ಗ್ರಾಮಗಳು ಬಹುತೇಕ ಬರಿದಾಗಿವೆ, ಹೊಲಗಳಲ್ಲಿ ಕಳೆಗಳು ಬೆಳೆದಿವೆ ಹಾಗೂ ಬೇಡಿಕೆಯಿರದ ಹಿನ್ನೆಲೆಯಲ್ಲಿ ಬಸ್ ಮತ್ತು ರೈಲು ಸೇವೆಗಳು ಅನಿಯಮಿತವಾಗಿವೆ.

75ರ ಬಳಿಕ ಕುಸಿತ ಆರಂಭ

ಜಪಾನ್‌ನಲ್ಲಿ ಜನಸಂಖ್ಯಾ ಬೆಳವಣಿಗೆ ದರ 1950ರಲ್ಲಿ ಗರಿಷ್ಠವಾಗಿತ್ತು. 1975ರ ಬಳಿಕ ಅದು ನಿರಂತರವಾಗಿ ಕುಸಿಯುತ್ತಾ ಬಂದಿದೆ. 2011ರಲ್ಲಿ ಜನಸಂಖ್ಯಾ ಬೆಳವಣಿಗೆ ದರ ಸೊನ್ನೆಗೆ ಇಳಿದಿತ್ತು ಎಂದು ಜನಗಣತಿಯ ಅಂಕಿಸಂಖ್ಯೆಗಳು ಹೇಳುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News