×
Ad

ಎಚ್‌ಡಿಕೆ ಅಸಹನೆಗೆ ಕಾರಣ: ಸಿದ್ದರಾಮಯ್ಯ

Update: 2016-02-27 23:43 IST

ಬೆಂಗಳೂರು, ಫೆ.27: ಹಿಂದುಳಿದ ವರ್ಗದವನಾದ ತಾನು ಮುಖ್ಯಮಂತ್ರಿಯಾಗಿರುವುದನ್ನು ಸಹಿಸಿಕೊಳ್ಳಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಗೆ ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಹೊಟ್ಟೆಕಿಚ್ಚಿನಿಂದ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದವರು ಅಧಿಕಾರವನ್ನು ಪೂರೈಸಲು ಅವಕಾಶ ನೀಡಬಾರದು ಎಂಬ ಹುನ್ನಾರ ಆರಂಭದಿಂದಲೂ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳ್ಳತನವಾಗಿದ್ದ ಕೈಗಡಿಯಾರವನ್ನು ತಾನು ಧರಿಸಿದ್ದೇನೆ ಎಂಬ ರೀತಿಯಲ್ಲಿ ಹೇಳಿಕೆಗಳನ್ನು ನೀಡುವ ಮೂಲಕ ದುರುದ್ದೇಶ ಪೂರ್ವಕವಾಗಿ ತನ್ನ ತೇಜೋ ವಧೆಗೆ ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ. ಕೈಗಡಿಯಾರವನ್ನು ಕಳೆದು ಕೊಂಡಿರುವ ಡಾ.ಸುಧಾಕರ್ ಶೆಟ್ಟಿಯೇ ಆ ಕೈಗಡಿಯಾರದ ಬಗ್ಗೆ ಸ್ಪಷ್ಟಣೆ ನೀಡಿದ್ದರೂ ಪದೇ ಪದೇ ಕುಮಾರಸ್ವಾಮಿ ಇದೇ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಕ್ಕೆ ಸೇರಿದ್ದ ಬಂಗಾರಪ್ಪ, ವೀರಪ್ಪಮೊಯ್ಲಿ ಮುಖ್ಯಮಂತ್ರಿಯಾಗಿದ್ದಾ ಗಲೂ ಇದೇ ರೀತಿಯ ಷಡ್ಯಂತ್ರಗಳು ನಡೆದು, ಕಡಿಮೆ ಅವಧಿಯಲ್ಲೇ ಅವರನ್ನು ಅಧಿಕಾರದಿಂದ ಪದಚ್ಯುತಿ ಗೊಳಿಸಲಾಗಿತ್ತು. ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದವರು ಮುಖ್ಯಮಂತ್ರಿಯಾಗಿ ಮುಂದುವರಿಯಬಾರದು ಎಂಬುದು ಅವರ ಉದ್ದೇಶ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ನನ್ನ ಹೆಸರಿಗೆ ಕಳಂಕ ತಂದು, ಸರಕಾರದ ವರ್ಚಸ್ಸು ಹಾಳು ಮಾಡಬೇಕು ಎಂಬುದು ಕುಮಾರಸ್ವಾಮಿಯ ಉದ್ದೇಶ. ತಾನು ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿಲ್ಲ. ಆದರೂ, ತಾನು ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುತ್ತೇನೆ, ಹೋದಲೆಲ್ಲ ಬೆಳ್ಳಿ ತಟ್ಟೆಯ ನ್ನು ಬ್ಯಾಗಿನಲ್ಲಿಟ್ಟುಕೊಂಡು ತಿರುಗುತ್ತೇನೆ ಎಂದು ಆರೋಪಿಸಿದ್ದಾರೆ. ಊಟದ ತಟ್ಟೆಯನ್ನು ಯಾರಾದರೂ ಬ್ಯಾಗಿನಲ್ಲಿಟ್ಟುಕೊಂಡು ಹೋಗುತ್ತಾರಾ ಎಂದು ಮುಖ್ಯಮಂತ್ರಿ ಕಿಡಿಕಾರಿದರು.

 ಕೇಂದ್ರ ಸಚಿವರನ್ನು ಭೇಟಿ ಮಾಡುವ ಉದ್ದೇಶದಿಂದ ಶುಕ್ರವಾರ ದಿಲ್ಲಿಗೆ ತೆರಳಿದ್ದೆ. ಹಾಗೆಯೇ ಪಕ್ಷದ ಹೈಕಮಾಂಡ್ ಜೊತೆ ಚರ್ಚೆ ಮಾಡಿ, ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯ ಫಲಿತಾಂಶಗಳ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಚರ್ಚೆಗೊಳ ಪಡುತ್ತಿರುವ ಕೈಗಡಿಯಾರದ ವಿಚಾರದ ಕುರಿತು ಹೈಕಮಾಂಡ್ ನನ್ನ ಬಳಿ ಯಾವುದೇ ಸ್ಪಷ್ಟೀಕರಣ ಕೇಳಿಲ್ಲ. ನಾನು ಈ ವಿಚಾರದಲ್ಲಿ ಅವರಿಗೆ ಏನೂ ಹೇಳಲಿಲ್ಲ.
ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News