×
Ad

ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡ ಭಾಷೆ ಬಳಕೆ: ಡಾ.ಎಲ್.ಹನುಮಂತಯ್ಯ ಸೂಚನೆ

Update: 2016-02-27 23:44 IST

ಬೆಂಗಳೂರು, ಫೆ.27: ಕನ್ನಡ ಭಾಷೆಯನ್ನು ಆಡಳಿತದ ಎಲ್ಲ್ಲ ಹಂತಗಳಲ್ಲಿ ಬಳಕೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳೂ ಕಾರ್ಯೋನ್ಮುಖರಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಇಂದಿಲ್ಲಿ ಸೂಚನೆ ನೀಡಿದ್ದಾರೆ.
ಶನಿವಾರ ಇಲ್ಲಿನ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ತಮ್ಮ ದೈನಂದಿನ ಆಡಳಿತದಲ್ಲಿ ಪ್ರಮುಖವಾಗಿ ಸರಳ ಕನ್ನಡಪರ ಬಳಕೆ ಮಾಡುವಂತೆ ಮನವಿ ಮಾಡಿದರು.
ಕೆಎಎಸ್ ಅಧಿಕಾರಿಗಳು ಕನ್ನಡವನ್ನು ಸಮರ್ಥವಾಗಿ ಬಳಸಬಹುದು. ಆದರೂ, ಐಎಎಸ್ ಅಧಿಕಾರಿಗಳನ್ನು ಅನುಕರಣೆಯಿಂದ ಕನ್ನಡ ಬಳಕೆ ಕ್ಷೀಣಿಸಿದೆ. ಜಾಗತೀಕರಣ, ಖಾಸಗೀಕರಣ, ವ್ಯಾಪಾರೀಕರಣದ ಪ್ರಭಾವದಿಂದ ಕನ್ನಡ ಭಾಷೆ ಮೇಲಿನ ವಿಶ್ವಾಸವೂ ಕುಂದುತ್ತಿದೆ ಎಂದು ಹನುಮಂತಯ್ಯ ಹೇಳಿದರು.
ಇಂದು ರಾಜ್ಯದ ಅಭಿವೃದ್ಧಿಗೆ ಆಯವ್ಯಯ ಎಷ್ಟು ಮುಖ್ಯವೋ ಅದೇರೀತಿ ಆಡಳಿತದಲ್ಲಿ ಕನ್ನಡ ಬಳಕೆಯಾಗುವುದರಿಂದ ಕನ್ನಡ ಭಾಷೆ, ನಾಡು, ನುಡಿ, ಸಂಸ್ಕೃತಿ ಬೆಳವಣಿಗೆ ಸಹಕಾರಿಯಾಗಲಿದೆ ಎಂದ ಅವರು, ಕನ್ನಡ ಭಾಷೆಯನ್ನು ಬೆಳೆಸುವ ದೊಡ್ಡ ಶಕ್ತಿ ಹಾಗೂ ಜವಾಬ್ದಾರಿ ಅಧಿಕಾರಿಗಳಲ್ಲಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್, ಬೇರೆ ಭಾಷೆಯನ್ನು ಕನ್ನಡ ಭಾಷೆಗೆ ಭಾಷಾಂತರ ಮಾಡುವ ವೇಳೆ ಅಧಿಕಾರಿಗಳು ಎಚ್ಚರ ವಹಿಸಿದಾಗ ಸರಕಾರದ ಸುತ್ತೋಲೆಗಳಿಗೆ ಹಾಗೂ ಆಡಳಿತಕ್ಕೆ ಅನುಕೂಲವಾಗಲಿದೆ. ಸ್ಥಳೀಯ ಜನರ ಭಾಷೆಯಲ್ಲಿ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳೂ ಮುಂದಾಗಬೇಕೆಂದರು.
ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್, ನಿವೃತ್ತ ಕಾರ್ಯದರ್ಶಿ ಡಾ.ಸಿ.ಸೋಮಶೇಖರ್, ಸಾಹಿತಿ ಪ್ರೊ.ಅಶ್ವತ್ಥ್ ನಾರಾಯಣ ಕಾರ್ಯಕ್ರಮದಲ್ಲಿ ವಿಚಾರ ಮಂಡನೆ ಮಾಡಿದರು. ಸರಕಾರದ ಅಪರ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳೂ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News