×
Ad

ಹಿಂದೂ ಧರ್ಮ ತಿರಸ್ಕರಿಸಿ: ಪ್ರೊ.ಚಂಪಾ

Update: 2016-02-27 23:50 IST

ಬೆಂಗಳೂರು, ಫೆ.27: ಹಿಂದೂ ಧರ್ಮವನ್ನು ತಿರಸ್ಕರಿಸುವ ಜೊತೆಗೆ ಬಸವಣ್ಣ, ಪೆರಿಯಾರ್, ಜ್ಯೋತಿಬಾ ಫುಲೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿರುವ ಧರ್ಮದ ಹಾದಿಯಲ್ಲಿ ನಡೆಯಬೇಕೆಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಕರೆ ನೀಡಿದ್ದಾರೆ.

ಶನಿವಾರ ಇಲ್ಲಿನ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಸೆನೆಟ್ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ(ಸಮತಾವಾದ) ಬೆಂಗಳೂರು ಜಿಲ್ಲಾ ಸಮಿತಿ ಏರ್ಪಡಿಸಿದ್ದ, ಸಾಮಾಜಿಕ ಪರಿವರ್ತನಾ ಚಳವಳಿಯ ಮಹಾಚೇತನ ಮಹಾತ್ಮ ಜ್ಯೋತಿಬಾ ಫುಲೆಯವರ 189ನೆ ಜಯಂತಿ ಅಂಗವಾಗಿ ‘ಜ್ಞಾನ ಪ್ರಸಾರ ಐಕ್ಯತಾ ಸಮಾರಂಭ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಿಂದೂ ಧರ್ಮ ಎಂಬ ಶಬ್ದವನ್ನೇ ನಾವು ಬಳಕೆ ಮಾಡಬಾರದು. ದೇಶದ ಸುಪ್ರೀಂ ಕೋರ್ಟ್ ಸಹ ಹಿಂದೂ ಧರ್ಮ ಎಂಬುವುದು ಎಲ್ಲೂ ಉಲ್ಲೇಖವಾಗಿಲ್ಲ ಎಂದು ಆದೇಶ ನೀಡಿದೆ. ಇದೊಂದು, ವೈದಿಕ-ಬ್ರಾಹ್ಮಣ ಧರ್ಮವಾಗಿದೆ. ಅಲ್ಲದೆ, ಯಾರು ಜನಿವಾರ ಹಾಕುವುದಿಲ್ಲವೋ ಅವರೆಲ್ಲ ಶೂದ್ರರೇ ಎಂದು ಚಂಪಾ ಪ್ರತಿಪಾದಿಸಿದರು.
ಮಹಾತ್ಮ ಗಾಂಧಿಜಿ ಅವರು ರಾಜಕೀಯ ಪರಿವರ್ತನೆಗೆ ಹೆಚ್ಚು ಒತ್ತು ನೀಡಿದ್ದಾರೆ. ಆದರೆ, ಮಹಾತ್ಮ ಜ್ಯೋತಿಬಾ ಫುಲೆ ಅವರು ಸಾಮಾಜಿಕ ಪರಿವರ್ತನೆಯ ಬಗ್ಗೆ ಸದಾ ಚಿಂತನೆ ಮಾಡುತ್ತಿದ್ದರು. ಹೀಗಾಗಿಯೇ ಅವರನ್ನು ಪ್ರತಿಯೊಬ್ಬರು ಸ್ಮರಿಸಬೇಕೆಂದು ಹೇಳಿದರು.

ನೂರು ದೇವತೆಗಳನ್ನು ನೂಕಾಚೆ ಹಾಗೂ ಗುಡಿ-ಮಸೀದಿಗಳನ್ನು ಧ್ವಂಸ ಮಾಡಿ ಹೊರ ಬಂದರೆ ಮಾತ್ರ ಮಾನವೀಯತೆಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹಲವು ಮಹನೀಯರು ಹೇಳಿ ಹೋಗಿದ್ದಾರೆ. ಆದರೆ, ಇಂದಿಗೂ ನಮ್ಮಲ್ಲಿನ ಭೇದ-ಭಾವ ಕಡಿಮೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಬಡವರು ಕೆಲಸ ಮಾಡಿದರೆ ಬೆವರು ಬರುತ್ತದೆ. ಆದರೆ, ಬ್ರಾಹ್ಮಣರು ಊಟ ಮಾಡಿದ ನಂತರ ಅವರಿಗೆ ಬೆವರು ಬರುತ್ತೆ. ಶಾರದ-ಸರಸ್ಪತಿ ದೇವತೆಗಳು ಶಿಕ್ಷಣ ಕ್ಷೇತ್ರದ ಮಹಾನೀಯರು ಎಂದು ಒಂದು ವರ್ಗ ಸುಳ್ಳು ಹೇಳುತ್ತಿದ್ದು, ಶಾರದ-ಸರಸ್ಪತಿ ದೇವತೆಗಳು ಯಾವ ವಿಶ್ವವಿದ್ಯಾನಿಲಯಗಳಲ್ಲಿ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ? ಅವರು ಯಾವ ಭಾಷೆಯಲ್ಲಿ ಪ್ರಬಲರಾಗಿದ್ದರು ಎಂಬುವುದೇ ತಿಳಿದಿಲ್ಲ ಎಂದು ವ್ಯಂಗ್ಯವಾಡಿದರು.
ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ‘ಮನುಸ್ಮತಿ’ ಯನ್ನು ಸುಟ್ಟು ಹಾಕಬೇಕೆಂದು ಪೆರಿಯಾರ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಇದರಲ್ಲಿನ ಅನೇಕ ಅಂಶಗಳು ಶೂದ್ರರನ್ನು ಕೀಳು ಮನೋಭಾವನೆಯಿಂದ ಕಾಣುವಂತೆ ಮಾಡಿದೆ. ಇಂತಹ ಮನುಸ್ಮತಿಯನ್ನು ಮನಸ್ಸಿನಿಂದಲೇ ಪ್ರತಿಯೊಬ್ಬರು ಸುಟ್ಟುಹಾಕಲು ಮುಂದಾಗಬೇಕೆಂದು ತಿಳಿಸಿದರು.
ರಾಮಾಯಣ-ಮಹಾಭಾರತದಲ್ಲಿ ಬರುವರೆಲ್ಲರನ್ನು ದೇವತೆಗಳೆಂದು ಅಮಾಯಕರ ಮನಸ್ಸಿನಲ್ಲಿ ತುಂಬಿಸಿದ್ದು, ಇದನ್ನು ನಾವು ಕಿತ್ತು ಎಸೆಯಬೇಕು ಎಂದ ಅವರು, ಸ್ವಾಭಿಮಾನಿಗಳಿಗೆ ಯಾವುದೇ ಧರ್ಮ-ಜಾತಿಯಿಲ್ಲ, ಅವರೆಲ್ಲರೂ ದೇಶದ ಸಂವಿಧಾನವನ್ನೇ ಧರ್ಮಗ್ರಂಥ ಎಂದು ನಂಬಿಕೆ ಇಟ್ಟವರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ(ಸಮತಾವಾದ) ಅಧ್ಯಕ್ಷ ಎಚ್.ಮಾರಪ್ಪ, ವಕೀಲ ಎಚ್.ಆರ್.ವಿಶ್ವನಾಥ್, ಸಂಘಟನೆಯ ಮುಖಂಡರಾದ ಬೇಗೂರು ಟಿ.ಚಂದ್ರಪ್ಪ, ಎಸ್.ರಮೇಶ್, ಎಲ್.ಎಂ.ಮುನಿಭೈರಪ್ಪ ಸೇರಿ ಪ್ರಮುಖರು ಉಪಸ್ಥಿತರಿದ್ದರು.

 ಸತ್ಯನಾರಾಯಣ ಪೂಜಾ ಪುಸ್ತಕ ಸೇರಿ ಅನೇಕ ಕಡೆಗಳಲ್ಲಿ ಬಡ ಬ್ರಾಹ್ಮಣರಿಗೆ ಮಾತ್ರ ದಾನ ಮಾಡಬೇಕೆಂದು ಹೇಳಿದ್ದಾರೆ. ಆದರೆ, ಬಡ ದಲಿತ, ಕುರುಬ, ಭೋವಿ ಸೇರಿ ಇತರೆ ಶೂದ್ರ ಸಮುದಾಯಗಳಿಗೆ ದಾನ ಮಾಡಬೇಕೆಂದು ಏಕೆ ಹೇಳಿಲ್ಲ?
-ಜ್ಞಾನಪ್ರಕಾಶ್ ಸ್ವಾಮೀಜಿ, ಉರಿಲಿಂಗ ಪೆದ್ದಿಮಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News