×
Ad

ಇಸ್ಲಾಮ್ ಜಗತ್ತಿನ ಶಾಂತಿಗೆ ಬಾಂಬ್ ಇಟ್ಟಿದೆ: ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ

Update: 2016-02-28 18:01 IST

ಶಿರಸಿ, ಫೆ.28: ಎಲ್ಲಿಯವರೆಗೆ ಜಗತ್ತಿನಲ್ಲಿ ಇಸ್ಲಾಮ್ ಇರುತ್ತದೆಯೊ ಅಲ್ಲಿಯವರೆಗೆ ಭಯೋತ್ಪಾದನೆಯನ್ನು ಮಟ್ಟ ಹಾಕಲು ಸಾಧ್ಯವಿಲ್ಲ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಟೀಕಿಸಿದ್ದಾರೆ.

ರವಿವಾರ ಶಿರಸಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಭಯೋತ್ಪಾದನೆಗೆ ಕೇಂದ್ರ ಬಿಂದುವಾಗಿದೆ. ಇಸ್ಲಾಮ್ ಜಗತ್ತಿನ ಶಾಂತಿಗೆ ಬಾಂಬ್ ಇಟ್ಟಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ದೇಶದಲ್ಲಿ ಕೆಲ ಬುದ್ದಿಜೀವಿಗಳು ಮತ್ತು ಮಾಧ್ಯಮದವರು ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದಾರೆ. ಜೆಎನ್‌ಯು ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟನೆಯು ಇದಕ್ಕೆ ಸಾಕ್ಷಿಯಾಗಿದೆ. ದೇಶದ್ರೋಹದ ಕುರಿತಾಗಿ ಕೇಂದ್ರ ಸರಕಾರ ಕಠಿಣ ನಿಲುವು ತಳೆಯುವ ಸಂದರ್ಭದಲ್ಲಿ ದೇಶದ್ರೋಹಿ ಚಟುವಟಿಕೆಗಳನ್ನು ವೈಭವೀಕರಿಸುವ ಮಾಧ್ಯಮಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕಾದ ಸ್ಥಿತಿ ಇಂದು ನಿರ್ಮಾಣವಾಗಿದೆ. ಇಂದು ಇಡೀ ದೇಶದ ಭಯೋತ್ಪಾದಕ ಕೇಂದ್ರ ಉತ್ತರ ಕನ್ನಡದ ಭಟ್ಕಳ ಹಾಗೂ ಅಜಂಘಡ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಇಸ್ಲಾಮ್ ಇರುವವರೆಗೆ ಭಯೋತ್ಪಾದನೆ ನಿಯಂತ್ರಣ ಹಾಗೂ ಜಗತ್ತಿನಲ್ಲಿ ಶಾಂತಿ ಇರಲು ಸಾಧ್ಯವಿಲ್ಲ. ಸರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ. ಮಾಧ್ಯಮಗಳು ಸಹ ಸರಕಾರದೊಂದಿಗೆ ಸಹಕರಿಸಿ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು ಎಂದರು.

ಸರಕಾರ ಭಯೋತ್ಪಾದಕನ ಬಗ್ಗೆ ಪೂರಕ ಸಾಕ್ಷಾಧಾರಗಳನ್ನು ಕೊಟ್ಟರೂ ಸಹ ಕೆಲ ಮಾಧ್ಯಮಗಳು ಅದನ್ನು ಪ್ರಚಾರ ಮಾಡುವ ಬದಲು ಭಯೋತ್ಪಾದಕನಿಗೆ ಪೂರಕವಾದ ವರದಿಗಳನ್ನು ಪದೇ ಪದೇ ಮಾಡುತ್ತಿದೆ. ದೇಶದ್ರೋಹಿಗಳಿಗೆ ಹೆಚ್ಚು ಪ್ರಚಾರ ನೀಡುವ ಮೂಲಕ ಕೆಲ ದೃಶ್ಯ ಮಾಧ್ಯಮಗಳು ದೇಶದ್ರೋಹಿ ಚಟುವಟಿಕೆ ನಡೆಸುತ್ತಿವೆಯೇ ಎಂಬ ಭಾವನೆ ಹುಟ್ಟಿಸಿವೆ. ಭಯೋತ್ಪಾದನೆ ಹಾಗೂ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ವೈಭವೀಕರಿಸುವ ಇಂತಹ ಮಾಧ್ಯಮಗಳ ಮೇಲೂ ದೇಶದ್ರೋಹದ ಆಪಾದನೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು. ಜಾತ್ಯತೀತತೆಯ ಹೆಸರಿನಲ್ಲಿ ಕೆಲ ರಾಜಕಾರಣಿಗಳು ಸಹ ಭಯೋತ್ಪಾದನೆಯಂತ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿವೆ. ಜಾತ್ಯತೀತತೆ ಬಿಟ್ಟು ರಾಷ್ಟ್ರೀಯವಾದ ಅಳವಡಿಸಿಕೊಂಡಾಗ ಮಾತ್ರ ರಾಷ್ಟ್ರವಿರೋಧಿ ಚಟುವಟಿಕೆ ಹತ್ತಿಕ್ಕಬಹುದು ಎಂದು ಅನಂತಕುಮಾರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ಜೋಶಿ, ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಜಿಪಂ ಸದಸ್ಯೆ ಉಷಾ ಹೆಗಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News