ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೇ.57ರಷ್ಟು ಮತದಾನ
ಮಾ.2ಕ್ಕೆ ಫಲಿತಾಂಶ ಪ್ರಕಟ
ಬೆಂಗಳೂರು, ಫೆ. 28: ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರವಿವಾರ ನಡೆದ ಚುನಾವಣೆಯಲ್ಲಿ ಶೇ.57ರಷ್ಟು ಮತದಾನವಾಗಿದ್ದು, ಅಭ್ಯರ್ಥಿಗಳಾದ ಮನು ಬಳಿಗಾರ್ ಹಾಗೂ ಪ್ರೊ.ಬಿ.ಜಯಪ್ರಕಾಶ್‌ಗೌಡರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕೋಲಾರದಲ್ಲಿ ಶೇ.76.98ರಷ್ಟು ಗರಿಷ್ಠ ಮತದಾನವಾದರೆ, ದಕ್ಷಿಣ ಕನ್ನಡದಲ್ಲಿ ಶೇ.16.6ರಷ್ಟು ಕನಿಷ್ಠ ಮತದಾನವಾಗಿದೆ. ಅತಿಹೆಚ್ಚು ಮತದಾರರನ್ನು ಒಳಗೊಂಡಿರುವ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.35.48ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಕೆ.ನಾಗರಾಜು ತಿಳಿಸಿದ್ದಾರೆ.
ಫೆ.2ರಂದು ಫಲಿತಾಂಶ: ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆದಿರುವ ಚುನಾವಣೆಯಲ್ಲಿ ಮತ ಎಣಿಕೆ ಪೂರ್ಣಗೊಂಡಿದ್ದು, ಫಲಿತಾಂಶವು ಚುನಾವಣಾಧಿಕಾರಿಗಳ ಬಳಿಯಲ್ಲಿದ್ದು, ಫೆ.2ರಂದು ಅಧಿಕೃತವಾಗಿ ಜಯಗಳಿಸಿದ ಅಭ್ಯರ್ಥಿಯನ್ನು ಘೋಷಿಸಲಿದ್ದಾರೆ.
ಹಿರಿಯ ಸಾಹಿತಿಗಳ ಉತ್ಸಾಹ: ನಾಡಿನ ಹಿರಿಯ ಸಾಹಿತಿಗಳು ಕಸಾಪ ಚುನಾವಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಮತದಾನ ಮಾಡಿದರು. ಮತದಾನ ಪ್ರಾರಂಭವಾಗುತ್ತಿದ್ದಂತೆ ಹಿರಿಯ ಸಾಹಿತಿ ಪ್ರೊ.ಜಿ.ವೆಂಕಟಸುಬ್ಬಯ್ಯ ಮತದಾನ ನಡೆಯುತ್ತಿದ್ದ ನ್ಯಾಶನಲ್ ಹೈಸ್ಕೂಲ್‌ಗೆ ಬಂದು ಮತ ಚಲಾಯಿಸಿದರು. ಇವರ ಹಾದಿಯಾಗಿ ಪ್ರೊ.ಬರಗೂರು ರಾಮಚಂದ್ರಪ್ಪ, ಗೊ.ರು.ಚೆನ್ನಬಸಪ್ಪ, ನರಹಳ್ಳಿ ಬಾಲಸುಬ್ರಹ್ಮಣ್ಯ ಸೇರಿದಂತೆ ಅನೇಕ ಸಾಹಿತಿಗಳು ಮತ ಚಲಾಯಿಸಿದರು.
ಗಣ್ಯರ ಮತದಾನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಉಮಾಶ್ರೀ ಮತದಾನ ಮಾಡಿ, ಅಭ್ಯರ್ಥಿಗಳಿಗೆ ಶುಭಕೋರಿದರು. ವಾರ್ತಾಸಚಿವ ರೋಷನ್ ಬೇಗ್ ಮತಚಲಾಯಿಸಿ ಕಸಾಪದ ಚುನಾವಣಾ ಪ್ರಚಾರದ ಭರಾಟೆ ನೋಡಿ ಬೇಸರ ವ್ಯಕ್ತಪಡಿಸಿದರು. ಪೊಲೀಸ್ ಬಿಗಿ ಭದ್ರತೆ: ಕಸಾಪ ಚುನಾವಣೆಯನ್ನು ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಪೊಲೀಸ್ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಅಭ್ಯರ್ಥಿಗಳ ಪರವಾದ ಕಾರ್ಯಕರ್ತರು ಮತಗಟ್ಟೆಗಳ ಸಮೀಪ ಸುಳಿಯದಂತೆ ಎಚ್ಚರ ವಹಿಸಿದ್ದರು. ಗುಂಪು ಗೂಡುತ್ತಿದ್ದ ಅಭ್ಯರ್ಥಿಗಳ ಬೆಂಬಲಿಗರನ್ನು ಪೊಲೀಸರು ನಿಗಾವಹಿಸಿ ಚದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿಯುತವಾಗಿ ಮತದಾನವಾಗಿದೆ.