×
Ad

ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳ ತೆರವು: ಡಾ.ಮುಹಮ್ಮದ್ ಯೂಸುಫ್

Update: 2016-02-28 23:43 IST

ಮುರುಗಮಲ್ಲ ದರ್ಗಾಕ್ಕೆ ಸೇರಿದ 9.23 ಎಕರೆ ಮರುವಶ
ಬೆಂಗಳೂರು, ಫೆ.28: ರಾಜ್ಯದ ವಿವಿಧ ಭಾಗಗಳಲ್ಲಿ ಕಾನೂನು ಬಾಹಿರವಾಗಿ ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್ ತಿಳಿಸಿದ್ದಾರೆ.
ರವಾರ ನಗರದಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಚಿಂತಾಮಣಿ ತಾಲೂಕಿನ ಮುರುಗಮಲ್ಲ ದರ್ಗಾಕ್ಕೆ ಸೇರಿದ 9 ಎಕರೆ 23 ಗುಂಟೆ ಜಮೀನಿನ ಒತ್ತುವರಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ಶನಿವಾರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದೆ. 40 ವರ್ಷಗಳಿಂದ ಈ ಒತ್ತುವರಿಯನ್ನು ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ ಎಂದರು.
ಒತ್ತುವರಿ ಮಾಡಿಕೊಂಡಿದ್ದ ಜಾಗದಲ್ಲಿ ಸುಮಾರು 200ಅಂಗಡಿಗಳನ್ನು ನಿರ್ಮಿಸಿ ಕೊಳ್ಳಲಾಗಿತ್ತು. ಈ ಪೈಕಿ ಕೆಲವು ಅಂಗಡಿಗಳು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರೆ, ಇನ್ನು ಕೆಲವು ನೇರವಾಗಿ ದರ್ಗಾಕ್ಕೆ ಸರಬರಾಜಾಗುತ್ತಿದ್ದ ವಿದ್ಯುತ್ ಲೈನ್‌ನಿಂದಲೆ ಸಂಪರ್ಕ ತೆಗೆದುಕೊಂಡಿದ್ದರು ಎಂದು ಅವರು ಹೇಳಿದರು.
ಈ ಅಂಗಡಿಗಳಿಂದ ಪ್ರತಿದಿನ ಎರಡು ಟನ್‌ಗಿಂತ ಹೆಚ್ಚಿನ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅದನ್ನು ವಿಲೇವಾರಿ ಮಾಡುವ ಕೆಲಸವನ್ನು ದರ್ಗಾ ಮುಖಂಡರು ಮಾಡಬೇಕಿತ್ತು. ಈ ಅನಧಿಕೃತ ಅಂಗಡಿಗಳಿಗೆ ಒಂದು ದಿನಕ್ಕೆ 10-15 ಸಾವಿರ ಲೀಟರ್ ನೀರು ಬಳಕೆಯಾಗುತ್ತಿತ್ತು. ದರ್ಗಾ ಆವರಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಚಿತ್ವವಿಲ್ಲ. ಸಾರ್ವಜನಿಕರಿಗೆ ರಕ್ಷಣೆ ಇಲ್ಲದಂತಹ ಪರಿಸ್ಥಿತಿಯಿದೆ ಎಂದು ಮುಹಮ್ಮದ್ ಯೂಸುಫ್ ತಿಳಿಸಿದರು.

200 ಅಂಗಡಿಗಳಿಂದ ದರ್ಗಾ ಅಥವಾ ವಕ್ಫ್‌ಬೋರ್ಡ್‌ಗೆ ಬಾಡಿಗೆ ಯೂ ಪಾವತಿಯಾಗುತ್ತಿರಲಿಲ್ಲ. ಸ್ಥಳೀಯ ಮಾಫಿಯಾ ಅಂಗಡಿಗಳಿಂದ ಹಣ ವಸೂಲು ಮಾಡಿಕೊಳ್ಳುತ್ತಿತ್ತು. ಆದರೆ, ದರ್ಗಾಕ್ಕೆ ಮಾತ್ರ ಯಾವುದೆ ಬಗೆಯಲ್ಲಿ ನೆರವು ನೀಡುತ್ತಿರಲಿಲ್ಲ. ಈ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಒಂದು ವರ್ಷದಿಂದ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಂಡು ಈ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಅವರು ಹೇಳಿದರು.
ಒತ್ತುವರಿ ತೆರವು ಮಾಡಿರುವ ಜಮೀನಿನ ಸುತ್ತಲು ಕಾಂಪೌಂಡ್ ನಿರ್ಮಿಸಿ, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಅಲ್ಲದೆ, ದರ್ಗಾದಲ್ಲಿ ಸಂಗ್ರಹವಾಗುವ ಹಣ ವನ್ನು ಸಂಪೂರ್ಣವಾಗಿ ದರ್ಗಾಕ್ಕೆ ಸಂಬಂಧಿಸಿದ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗಿಸಲಾಗುವುದು ಎಂದು ಮುಹಮ್ಮದ್ ಯೂಸುಫ್ ತಿಳಿಸಿದರು.
ಮುರುಗಮಲ್ಲ ದರ್ಗಾಕ್ಕೆ ನಮ್ಮ ರಾಜ್ಯದವ ರಷ್ಟೇ ಅಲ್ಲದೆ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ, ಪಾಂಡಿಚೇರಿ ಸೇರಿದಂತೆ ಅನೇಕ ರಾಜ್ಯಗಳಿಂದ ಜನರು ಭೇಟಿ ನೀಡುತ್ತಾರೆ. ಆದುದರಿಂದ, ಮುರುಗ ಮಲ್ಲದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ 40 ಅಂಗಡಿಗಳನ್ನು ನಿರ್ಮಿಸಲಾ ದ್ದು, ಇನ್ನು 36 ಅಂಗಡಿಗಳು ಮುಕ್ತಾಯದ ಹಂತದಲ್ಲಿವೆ ಎಂದು ಅವರು ಹೇಳಿದರು.
ಇದಲ್ಲದೆ, ಯಾತ್ರಾರ್ಥಿಗಳ ಅನು ಕೂಲಕ್ಕಾಗಿ ವಸತಿ, ಶೌಚಾಲಯ, ಸ್ನಾನಗೃಹ, ಆರೋಗ್ಯ ಕೇಂದ್ರ, ಹೊಟೇಲ್‌ಗಳು ಹಾಗೂ ಪೊಲೀಸ್ ಚೌಕಿಗಳನ್ನು ನಿರ್ಮಿಸಲಾಗುವುದು. ದರ್ಗಾ ಆವರಣದ ಸುತ್ತಲೂ ಸಂಪೂರ್ಣವಾಗಿ ಕಾಂಪೌಂಡ್ ನಿರ್ಮಿಸಿ, ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು.
ಮುರುಗಮಲ್ಲದಲ್ಲಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವು ಮಾಡಿದ ಮಾದರಿಯಲ್ಲೆ ರಾಜ್ಯದ ಇತರ ಭಾಗಗಳಲ್ಲಿಯೂ ಒತ್ತುವರಿ ತೆರವು ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಿಎಂ ಸಿದ್ದರಾಮಯ್ಯ 2014-15ನೆ ಸಾಲಿನ ಬಜೆಟ್‌ನಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಒತ್ತುವರಿ ತೆರವುಮಾಡಲು ಎಸ್ಪಿದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ಕಾರ್ಯಪಡೆ ರಚಿಸುವುದಾಗಿ ಘೋಷಿಸಿದ್ದರು. ಈ ಕಾರ್ಯಪಡೆ ಅಸ್ತಿತ್ವಕ್ಕೆ ಬಂದರೆ, ರಾಜ್ಯಾದ್ಯಂತ ಇರುವ ದರ್ಗಾ, ಖಬರಸ್ಥಾನ್, ಈದ್ಗಾ ಸೇರಿದಂತೆ ಇನ್ನಿತರ ವಕ್ಫ್ ಆಸ್ತಿಗಳಲ್ಲಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಹೆಚ್ಚಿನ ಸಹಕಾರಿಯಾಗಲಿದೆ ಎಂದು ಮುಹಮ್ಮದ್ ಯೂಸುಫ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News