ವಿಧಾನ ಮಂಡಲ ಅಧಿವೇಶನ ಇಂದು ಆರಂಭ
ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲರ ಭಾಷಣ
ಬೆಂಗಳೂರು, ಫೆ.28: ವರ್ಷಾರಂಭದ ಮೊದಲ ಜಂಟಿ ಅಧಿವೇಶನ ನಾಳೆ(ಫೆ.29) ಮಧ್ಯಾಹ್ನ 12ಗಂಟೆಯಿಂದ ಆರಂಭಗೊಳ್ಳಲಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ಯುದ್ಧಕ್ಕೆ ವೇದಿಕೆ ಸಜ್ಜುಗೊಂಡಿದೆ. ಕೆಲ ಊಹಾಪೋಹಗಳ ಮಧ್ಯೆಯೇ ಅಧಿವೇಶನ ಪ್ರಾರಂಭ ಆಗುತ್ತಿರುವುದು ರಾಜಕೀಯ ಕುತೂಹಲಕ್ಕೂ ಸಾಕ್ಷಿಯಾಗಿದೆ.
ರಾಜ್ಯವನ್ನು ಕಾಡುತ್ತಿರುವ ಭೀಕರ ಸ್ವರೂಪದ ಬರ, ಕುಡಿಯುವ ನೀರಿನ ತತ್ವಾರ, ವಿದ್ಯುತ್ ಕಣ್ಣಾಮುಚ್ಚಾಲೆ, ರೈತರ ಆತ್ಮಹತ್ಯೆ ಸೇರಿದಂತೆ ರಾಜ್ಯ ಸರಕಾರದ ಆಡಳಿತ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರಕಾರವನ್ನು ಅಡ್ಡಕತ್ತರಿಯಲ್ಲಿ ಸಿಲುಕಿಸಲು ವಿಪಕ್ಷ ಬಿಜೆಪಿ-ಜೆಡಿಎಸ್ ತಮ್ಮ ಬತ್ತಳಿಕೆಯಲ್ಲಿರುವ ಅಸ್ತ್ರಗಳಿಗೆ ಸಾಣೆ ಹಿಡಿಯುತ್ತಿವೆ.
ಈ ಮಧ್ಯೆಯೇ ಸಿಎಂ ಸಿದ್ದರಾಮಯ್ಯರಿಗೆ ಅವರ ಸ್ನೇಹಿತರೊಬ್ಬರು ಕೊಡುಗೆ ನೀಡಿದ ದುಬಾರಿ ಮೊತ್ತ ‘ಹ್ಯೂಬ್ಲಾಟ್’ ಕೈ ಗಡಿಯಾರದ ವಿಚಾರವೂ ವಿಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿ ದೊರೆತಿದೆ. ಉಪ ಚುನಾವಣೆ ಹಾಗೂ ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಹಿನ್ನಡೆಯಾಗಿರುವುದು ಅಧಿವೇಶನದಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳಿವೆ.
ರಾಜ್ಯಪಾಲರು ಬರ್ತಾರೇ: ವರ್ಷದ ಮೊದಲ ಜಂಟಿ ಅಧಿವೇಶ ಇದಾಗಿದ್ದು, ಸರಕಾರದ ಮುನ್ನೋಟ ಹಾಗೂ ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ‘ರಾಜ್ಯ ಸರಕಾರದ ಧ್ವನಿ’ಯಾಗಿ ರಾಜ್ಯಪಾಲರು ವಿಧಾನ ಮಂಡಲದ ಉಭಯಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ವರ್ಷಾರಂಭದ ಮೊದಲ ಅಧಿವೇಶ ಜನವರಿಯಲ್ಲಿ ನಡೆಸುವುದು ವಾಡಿಕೆ. ಆದರೆ, ಮೇಲ್ಮನೆ ಚುನಾವಣೆ, ಉಪ ಚುನಾವಣೆ, ಜಿಪಂ-ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಅಧಿವೇಶ ಫೆ.29ರಿಂದ ಪ್ರಾರಂಭ ಆಗುತ್ತಿದ್ದು, ಮಾರ್ಚ್ 5ರ ವರೆಗೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ, ಸರಕಾರಿ ಕಾರ್ಯಕಲಾಪ, ಪ್ರಶ್ನೋತ್ತರ ಕಲಾಪ ನಡೆಯಲಿದೆ. ನಾಳೆ(ಫೆ.29) ಮಧ್ಯಾಹ್ನ 12ಗಂಟೆಯ ಸುಮಾರಿಗೆ ರಾಜ್ಯಪಾಲರ ಜಂಟಿ ಅಧಿವೇಶ ಉದ್ದೇಶಿಸಿ ಮಾತನಾಡಲಿದ್ದು, ಮಾ.1ರ ಮಂಗಳವಾರದಿಂದ ಉಭಯ ಸನದಗಳಲ್ಲಿ ಆಡಳಿತ-ವಿಪಕ್ಷಗಳ ಸದಸ್ಯರುಗಳ ಮಧ್ಯೆ ವಾಗ್ಯುದ್ಧ ಕಾವೇರಿದ ವಾತಾವರಣವನ್ನು ನಿರ್ಮಿಸುವುದಂತೂ ನಿಶ್ಚಿತವಾಗಿದೆ.
ಈ ಮಧ್ಯೆಯೇ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ, ಬರ ಪರಿಹಾರ ಕಾಮಗಾರಿ, ಆ್ಯಂಬುಲೆನ್ಸ್ (108)ನೌಕರರ ಪ್ರತಿಭಟನೆ, ಅತಿಥಿ ಉಪನ್ಯಾಸಕರ ಖಾಯಮಾತಿ ಚಳವಳಿ, ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ಆಗ್ರಹಿಸಿ ಹೋರಾಟ ಅಧಿವೇಶನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಗಳಿವೆ.