ಮುಧೋಳ ಗಲಭೆ ಸಂತ್ರಸ್ತರಿಗೆ ಕೆಎಂಡಿಸಿ ವತಿಯಿಂದ ಸಾಲ ಸೌಲಭ್ಯ

Update: 2016-03-01 17:46 GMT

ಬೆಂಗಳೂರು, ಮಾ.1: ವಿಜಯಪುರ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಕಳೆದ ವರ್ಷ ಸೆ.23ರಂದು ಸಂಭವಿಸಿದ ಗಲಭೆಯಲ್ಲಿ ಅಂಗಡಿ, ಮುಂಗಟ್ಟುಗಳನ್ನು ಕಳೆದು ಕೊಂಡು ಕಂಗಾಲಾಗಿದ್ದವರಿಗೆ ರಾಜ್ಯ ಅಲ್ಪಸಂಖ್ಯಾ ತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದ ವತಿಯಿಂದ ಸಾಲ ಸೌಲಭ್ಯವನ್ನು ಒದಗಿಸಲಾಯಿತು.

ಮಂಗಳವಾರ ವಿಧಾನಸೌಧದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಡಾ.ಖಮರುಲ್ ಇಸ್ಲಾಮ್, ಸಂತ್ರಸ್ತರಿಗೆ 40 ಲಕ್ಷ ರೂ.ಮೊತ್ತದ ಸಾಲ ಸೌಲಭ್ಯದ ಚೆಕ್‌ನ್ನು ಹಸ್ತಾಂತರ ಮಾಡಿದರು.
 ಮುಧೋಳ ತಾಲೂಕಿನ ರಾಮದುರ್ಗದ ಅಕ್ಬರ್ ಬಾಷಾ ಅವರಿಗೆ ಸೇರಿದ ಬಟ್ಟೆಯ ಅಂಗಡಿ ಗಲಭೆ ಸಂದರ್ಭದಲ್ಲಿ ಸಂಪೂರ್ಣವಾಗಿ ಭಸ್ಮವಾಗಿ ಸುಮಾರು 10 ಕೋಟಿ ರೂ.ನಷ್ಟವುಂಟಾಗಿತ್ತು. ಅವರ ವ್ಯಾಪಾರವನ್ನು ಮತ್ತೆ ಆರಂಭಿಸಲು ಸಹಕಾರಿಯಾಗುವಂತೆ ಕೆಎಂಡಿಸಿ ವತಿಯಿಂದ 40 ಲಕ್ಷ ರೂ.ಸಾಲವನ್ನು ನೀಡಲಾಗುತ್ತಿದೆ ಎಂದು ಸಚಿವ ಖಮರುಲ್ ಇಸ್ಲಾಮ್ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯ ವಕ್ಫ್ ಕೌನ್ಸಿಲ್ ವತಿಯಿಂದ 50 ಲಕ್ಷ ರೂ., ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ 50 ಲಕ್ಷ ರೂ.ಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೆ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಕೆಎಂಡಿಸಿ ಅಧ್ಯಕ್ಷ ಡಾ.ಮಸೂದ್ ಫೌಜ್ದಾರ್ ಮಾತನಾಡಿ, ಸಚಿವ ಖಮರುಲ್ ಇಸ್ಲಾಮ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷೆ ಬಲ್ಕೀಸ್‌ಬಾನು ಹಾಗೂ ತಾನು ಮುಧೋಳದಲ್ಲಿ ಗಲಭೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆವು. ಸುಮಾರು 13-14 ಕೋಟಿ ರೂ.ಗಳಷ್ಟು ನಷ್ಟವನ್ನು ಸ್ಥಳೀಯರು ಅನುಭವಿಸಿದ್ದರು ಎಂದರು.
ಗಲಭೆಯಿಂದ ಸಂತ್ರಸ್ತರಾಗಿದ್ದ ಸಣ್ಣಪುಟ್ಟ ವ್ಯಾಪಾರಿಗಳಿಗೆ ಕೆಎಂಡಿಸಿ ವತಿಯಿಂದ ಈಗಾಗಲೆ 25.50 ಲಕ್ಷ ರೂ.ಸಾಲ ಸೌಲಭ್ಯ ನೀಡಲಾಗಿದೆ. ರಾಮದುರ್ಗದ ಅಕ್ಬರ್ ಬಾಷಾ ಅವರೊಬ್ಬರಿಗೆ ಸುಮಾರು 10 ಕೋಟಿ ರೂ.ಗಳಷ್ಟು ನಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ 40 ಲಕ್ಷ ರೂ.ಗಳನ್ನು ಇಂದು ಸಾಲದ ರೂಪದಲ್ಲಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷೆ ಬಲ್ಕೀಸ್‌ಬಾನು, ಮುಧೋಳ ಅಂಜುಮನ್ ಅಧ್ಯಕ್ಷ ಐ.ಎ.ವಕೀಲ್, ಕೆಎಂಡಿಸಿ ವ್ಯವಸ್ಥಾಪಕ ನಿರ್ದೇಶಕ ಸಲೀಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News