ಸಫಾಯಿ ಕರ್ಮಚಾರಿ ಕುಟುಂಬಗಳ ಸಮೀಕ್ಷೆ ಆರಂಭ
ಮೈಸೂರು, ಮಾ.1: ಸಮಾಜದಿಂದ ಹಿಂದುಳಿದಿರುವ ಸಫಾಯಿ ಕರ್ಮಚಾರಿ ಗಳನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಮೇಲೆತ್ತುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಾಜ್ಯದ ಎಲ್ಲ ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್, ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳ ಜೀವನ ವ್ಯವಸ್ಥೆಯನ್ನು ಅರಿಯುವ ನಿಟ್ಟಿನಲ್ಲಿ ಸಮೀಕ್ಷೆ ಕಾರ್ಯ ಆರಂಭಿಸಿದೆ.
ಫೆ.29ರಿಂದ ಆರಂಭವಾಗಿರುವ ಸಮೀಕ್ಷೆ ಕಾರ್ಯ ಮಾ.12ರಂದು ನಡೆಯಲಿದ್ದು, ಮೈಸೂರು ಜಿಲ್ಲೆಯಲ್ಲಿ ಅಂದಾಜು 357 ಸಫಾಯಿ ಕರ್ಮಚಾರಿ ಕುಟುಂಬಗಳಿವೆ ಎನ್ನಲಾಗುತ್ತಿದ್ದು, ಆ ಕುಟುಂಬಗಳ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಸಮೀಕ್ಷೆ ಬೆಳಕು ಚೆಲ್ಲಲಿದೆ.
ಸಮೀಕ್ಷೆಯ ಕುರಿತು ಜಿಲ್ಲಾಧಿಕಾರಿ ಸಿ.ಶಿಖಾ ಅವರ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲೆಯ ಸಫಾಯಿ ಕರ್ಮಚಾರಿ ಕುಟುಂಬಗಳ ಬಳಿ ತೆರಳಿ ಸಮೀಕ್ಷೆ ನಡೆಸುವ ಕುರಿತ ಚರ್ಚೆ ನಡೆಸಲಾಯಿತು.
ಗ್ರಾಮ ಪಂಚಾಯತ್ ಪಿಡಿಒಗಳು ಆ ಗ್ರಾಮದಲ್ಲಿ ವಾಸವಿರುವ ಸಫಾಯಿ ಕರ್ಮಚಾರಿಗಳ ಕುರಿತು ಮಾಹಿತಿ ಪಡೆಯಲಿದ್ದಾರೆ. ಸಮೀಕ್ಷೆಯ ನಂತರ ಸಫಾಯಿ ಕರ್ಮಚಾರಿ ಕುಟುಂಬಗಳಿಗೆ ಪುನರ್ವಸತಿ, ಆರೋಗ್ಯ ಸೌಲಭ್ಯ, ವಸತಿ ಸೌಕರ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರಕಾರ ನಿರ್ಧರಿಸಿದೆ.