ಜಿಲ್ಲೆಯಾದ್ಯಂತ ನರೇಗಾ ಕಾರ್ಯಾದೇಶ ವಿತರಣಾ ಆಂದೋಲನ: ಸಿಇಒ ಡಾ.ಮಮತಾ
ತುಮಕೂರು, ಮಾ.1: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲ ಮನೆಗಳಿಗೂ ಭೇಟಿ ನೀಡಿ ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಕಾಮಗಾರಿಗಳ ಕಾರ್ಯಾದೇಶವನ್ನು ನೀಡುವ ಆಂದೋಲನವನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಡಾ.ಬಿ.ಆರ್.ಮಮತಾ ತಿಳಿಸಿದ್ದಾರೆ.
ಕೊರಟಗೆರೆ ತಾಲೂಕಿನ ಮಿಟ್ರಹಳ್ಳಿಯಲ್ಲಿ ಸೋಮವಾರ ಏರ್ಪಡಿಸಿದ್ದ ನರೇಗಾ ಯೋಜನೆಯ ಫಲಾನುಭವಿಗಳಿಗೆ ಕಾಮಗಾರಿಯ ಕಾರ್ಯಾದೇಶ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡುತ್ತಿದ್ದ ಅವರು, ಆಯಾ ತಾಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸಂಬಂಧಿಸಿದ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಮುಂದಿನ 10 ದಿನಗಳಲ್ಲಿ ಈ ಯೋಜನೆಯನ್ನು ಸಮಾರೋಪಾದಿಯಲ್ಲಿ ಕೈಗೊಂಡು ಯೋಜನೆಯ ಪ್ರಯೋಜನವನ್ನು ಗ್ರಾಮೀಣ ಜನರಿಗೆ ಸಂಪೂರ್ಣವಾಗಿ ಮುಟ್ಟಿಸುವಂತೆ ಹಾಗೂ ಉದ್ಯೋಗ ಚೀಟಿ ಇಲ್ಲದವರಿಗೆ ಕೂಡಲೇ ವಿತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಹೊರ ರಾಜ್ಯಗಳಲ್ಲಿನ ಗ್ರಾಮೀಣ ಜನತೆ ನರೇಗಾ ಯೋಜನೆಯ ಪ್ರಯೋಜನವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಂಡಿದ್ದು, ಅದೇ ರೀತಿ ನಮ್ಮ ರಾಜ್ಯದ ಜನತೆ ಕೂಡ ಪ್ರಯೋಜನ ಪಡೆಯುವಲ್ಲಿ ಮುಂದೆ ಬರಬೇಕೆಂದ ಅವರು ಬಡ ಜನರು ನಿರುದ್ಯೋಗಿಗಳಾಗಿರಬಾರದೆಂಬ ಪ್ರಮುಖ ಉದ್ದೇಶದಿಂದ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ವರ್ಷದಲ್ಲಿ ಕನಿಷ್ಠ ಒಬ್ಬರಿಗೆ 150 ದಿನಗಳ ಉದ್ಯೋಗ ಈ ಯೋಜನೆಯಿಂದ ದೊರಕಲಿದ್ದು, ಗ್ರಾಮಕ್ಕೆ ಅಗತ್ಯವಾಗಿ ಬೇಕಾಗಿರುವ ಸಮುದಾಯ ಆಧಾರಿತ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ಮುಂದೆ ಬರಬೇಕು. ಫಲಾನುಭವಿಗಳು ಕಾಮಗಾರಿಗಳಲ್ಲಿ ಯಾವುದೇ ಯಂತ್ರೋಪಕರಣಗಳನ್ನು ಬಳಸಬಾರದೆಂದು ತಿಳಿಸಿದರು. ್ರಾಮದಲ್ಲಿನ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಲ್ಲದೆ ಪ್ರತಿಯೊಂದು ಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವಂತೆಯೂ ತಿಳಿಸಿದ ಅವರು, ಇದಕ್ಕಾಗಿ ಪ್ರತೀ ಕುಟುಂಬಕ್ಕೆ ತಲಾ 12 ಸಾವಿರ ಹಾಗೂ ಪರಿಶಿಷ್ಠ ಜಾತಿ ವರ್ಗಗಳ ಫಲಾನುಭವಿಗಳಿಗೆ 15 ಸಾವಿರ ರೂ.ಗಳನ್ನು ಸರಕಾರದಿಂದ ನೀಡಲಾಗುವುದು ಎಂದು ತಿಳಿಸಿದರು.ನಂತರ ಕೊರಟಗೆರೆ ತಾಲೂಕಿನ ಚಿನ್ನಹಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ, ನರೇಗಾ ಯೋಜನೆಯ ಕಾಮಗಾರಿಗಳ ಕಾರ್ಯಾದೇಶವನ್ನು ನೀಡುವ ಕಾರ್ಯಕ್ರಮಕ್ಕೂ ಸಿಇಒ ಡಾ.ಮಮತಾ ಚಾಲನೆ ನೀಡಿದರು.
ಗ್ರಾಪಂ ಅಧ್ಯಕ್ಷ ಬಿ.ಟಿ.ರಂಗಯ್ಯ, ತಾಪಂ ಇಒ ಮಂಜುಳಾ, ಗ್ರಾಪಂ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.