ಸೈಬರ್ ಅಪರಾಧಗಳ ತನಿಖೆಗೆ ಮುಂಬೈನಲ್ಲಿ ವಿಶೇಷ ಶಾಖೆಯ ಸ್ಥಾಪನೆಗೆ ಸಿಬಿಐ ಚಿಂತನೆ

Update: 2016-03-01 11:53 GMT

ಮುಂಬೈ,ಮಾ.1: ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸಹಕರಿಸಿದರೆ ಅವುಗಳ ತನಿಖೆಗಾಗಿ ಮುಂಬೈನಲ್ಲಿ ವಿಶೇಷ ಶಾಖೆಯನ್ನು ಸ್ಥಾಪಿಸಲು ಸಿಬಿಐ ಚಿಂತನೆ ನಡೆಸಿದೆ ಎಂದು ಅದರ ನಿರ್ದೇಶಕ ಅನಿಲ ಸಿನ್ಹಾ ಅವರು ಮಂಗಳವಾರ ಇಲ್ಲಿ ತಿಳಿಸಿದರು.


ಉಪನಗರಿ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಸಿಬಿಐನ ನೂತನ ಕಚೇರಿಯ ಉದ್ಘಾಟನೆಗಾಗಿ ಇಲ್ಲಿಗೆ ಭೇಟಿ ನೀಡಿದ್ದ ಅವರು, ಸದ್ಯ ಸೈಬರ್ ಅಪರಾಧಗಳ ತನಿಖೆಗೆ ವಿಶೇಷ ಶಾಖೆಯು ದಿಲ್ಲಿಯ ಕೇಂದ್ರ ಕಚೇರಿಯಲ್ಲಿ ಮಾತ್ರ ಇದೆ. ಇಂತಹುದೇ ಶಾಖೆಯನ್ನು ಮುಂಬೈನಲ್ಲಿ ಸ್ಥಾಪಿಸಲು ಇದು ಸಕಾಲವಾಗಿದೆ ಎಂದು ತಾನು ಭಾವಿಸಿದ್ದೇನೆ. ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು,ತಜ್ಞರು ಸೇರಿದಂತೆ ಅಧಿಕಾರಿಗಳ ವಿಶೇಷ ತಂಡವೊಂದು ಅಗತ್ಯವಾಗಿದೆ ಎಂದು ಹೇಳಿದರು.
 ಸಿಬಿಐನ ನೂತನ ಕಚೇರಿಯು 13 ಅಂತಸ್ತುಗಳನ್ನು ಹೊಂದಿದ್ದು,ಭ್ರಷ್ಟಾಚಾರ ನಿಗ್ರಹ ಘಟಕ,ಆರ್ಥಿಕ ಅಪರಾಧಗಳ ಘಟಕ ಸೇರಿದಂತೆ ಅದರ ಎಲ್ಲ ಶಾಖೆಗಳು ಇನ್ನು ಮುಂದೆ ಇಲ್ಲಿಂದಲೇ ಕಾರ್ಯಾಚರಿಸಲಿವೆ.


 ಸಿಬಿಐ ಮುಂಬೈನಲ್ಲಿ ಹರ್ಷದ್ ಮೆಹ್ತಾ ಹಗರಣ,ತೆಲಗಿ ನಕಲಿ ಸ್ಟಾಂಪ್ ಪೇಪರ್ ಹಗರಣ,ಆದರ್ಶ ಹೌಸಿಂಗ್ ಹಗರಣದಂತಹ ಹಲವಾರು ಪ್ರಕರಣಗಳನ್ನು ಭೇದಿಸಿದೆ ಎಂದು ಸಿನ್ಹಾ ತಿಳಿಸಿದರು. ಇವಲ್ಲದೆ,ಶೀನಾ ಬೋರಾ ಮತ್ತು ನರೇಂದ್ರ ದಾಭೋಲ್ಕರ್ ಹತ್ಯೆಗಳು ಸೇರಿದಂತೆ ಹಲವಾರು ಪ್ರಕರಣಗಳ ತನಿಖೆಯನ್ನೂ ಸಿಬಿಐ ನಡೆಸುತ್ತಿದೆ ಎಂದರು.


ಇತ್ತೀಚಿಗೆ ರಾಜ್ಯ ಸರಕಾರಗಳು ಮತ್ತು ಉಚ್ಚ ನ್ಯಾಯಾಲಯಗಳೂ ಹಲವಾರು ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸುತ್ತಿವೆ. ಭ್ರಷ್ಟಾಚಾರ ನಿಗ್ರಹ ಘಟಕವಾಗಿ ಸಿಬಿಐ ಆರಂಭಗೊಂಡಿತ್ತಾದರೂ ಅದರ ವ್ಯಾಪ್ತಿಯು ಆರ್ಥಿಕ ಅಪರಾಧಗಳು,ಗಂಭೀರ ವಂಚನೆಗಳು ಮತ್ತು ಐಪಿಸಿಯಡಿ ಮಹತ್ವದ ಪ್ರಕರಣಗಳಿಗೆ ವಿಸ್ತಾರಗೊಂಡಿದೆ. ಅದೀಗ ಒಕ್ಕೂಟ ತನಿಖಾ ಸಂಸ್ಥೆಯಾಗಿದ್ದು ಯಾವುದೇ ಪ್ರಕರಣದ ತನಿಖೆಯನ್ನು ನಡೆಸುತ್ತದೆ ಎಂದರು.


ಭ್ರಷ್ಟಾಚಾರದ ಕುರಿತು ಮಾತನಾಡಿದ ಅವರು,ಭ್ರಷ್ಟರು ತನಿಖಾ ಸಂಸ್ಥೆಗಳ ಕಣ್ಣಿಗೆ ಮಣ್ಣೆರಚಲು ಹೊಸ ಹೊಸ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ನಾವೂ ಕೌಶಲವನ್ನು ವೃದ್ಧಿಸಿಕೊಳ್ಳಬೇಕಾಗದೆ. ನಾವೀಗ ಭ್ರಷ್ಟರನ್ನು ಹಿಡಿಯಲು ಬಲೆಗಳನ್ನು ಹೆಣೆಯುವ ಬದಲು ಅವನ್ನೂ ಮೀರಿ ಯೋಚಿಸಬೇಕಿದೆ. ಇಂದಿನ ದಿನಗಳಲ್ಲಿ ಯಾರೂ ನೇರವಾಗಿ ಲಂಚವನ್ನು ಸ್ವೀಕರಿಸುವುದಿಲ್ಲ. ಹೀಗಾಗಿ ಭ್ರಷ್ಟಾಚಾರದ ವ್ಯಾಖ್ಯಾನವನ್ನು ವಿಸ್ತರಿಸಬೇಕಾದ ಅಗತ್ಯವಿದೆ ಎಂದು ಸಿನ್ಹಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News