ಕಾಂಗ್ರೆಸ್‌ಗೆ ಯಾರಾದರೂ ಮದ್ದು ಹಾಕಿದರೆ ಅದು ಶ್ರೀನಿವಾಸ್ ಪ್ರಸಾದ್: ವಿಶ್ವನಾಥ್
ಬೆಂಗಳೂರು, ಮಾ.1: ಕಾಂಗ್ರೆಸ್ ಮನೆಗೆ ಮದ್ದು ಯಾರಾದರೂ ಹಾಕಿದರೆ ಅದು ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಆಗಿದ್ದಾರೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮಂಗಳವಾರ ಕನ್ನಡ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀನಿವಾಸ್ ಪ್ರಸಾದ್ ಅವರಿಗೆ ಯಾವ ರೀತಿ ಅಮಲು ಏರಿದೆಯೋ ಗೊತ್ತಾಗುತ್ತಿಲ್ಲ. ಅವರ ಉತ್ತಮ ಕೆಲಸಗಳನ್ನು ಗುರುತಿಸಿ ಗುಂಡೂರಾವ್ ಅವರನ್ನು ಕರೆದುಕೊಂಡು ಬಂದು ಮೂರು ಬಾರಿ ಸಂಸದರನ್ನಾಗಿ ಮಾಡಿದ್ದರು ಎಂದು ಹೇಳಿದರು.
ಮತ್ತೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಲಿಲ್ಲ ಎಂದು ಕಾಂಗ್ರೆಸ್ ಮನೆಗೆ ಮದ್ದು ಹಾಕಿ ಕಾಂಗ್ರೆಸ್ ಬಿಟ್ಟು ಹೋಗಿದ್ದರು. ನಾನು 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಆದರೆ, ಎಂದೂ ಕಾಂಗ್ರೆಸ್ ಮನೆಗೆ ಮದ್ದು ಹಾಕುವ ಕೆಲಸ ಮಾಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಅವರಿಗೆ ಅಧಿಕಾರ ನೀಡಿರುವುದು ರಾಜ್ಯದ ಜನತೆ ಮತ್ತು ಪಕ್ಷ. ಅದೇ ಜನತೆ ಮತ್ತು ಪಕ್ಷ ನನಗೂ ಟೀಕಿಸುವ ಅಧಿಕಾರ ನೀಡಿದೆ. ಮುಖ್ಯಮಂತ್ರಿ ಹಾಗೂ ನಿಷ್ಕ್ರಿಯ ಸಚಿವರನ್ನು ಟೀಕಿಸುವ ಅಧಿಕಾರ ನನಗಿದೆ. ನಾಯಕತ್ವ ಬದಲಾವಣೆ, ಚರ್ಚೆ, ಸಮಾಜ ಅದು ಎಲ್ಲಾ ಕಾಲದಲ್ಲೂ ನಡೆಯುತ್ತದೆ. ಶ್ರೀನಿವಾಸ್ ಪ್ರಸಾದ್ ಹಾಗೂ ನಾನು ಒಳ್ಳೆಯ ಸ್ನೇಹಿತರು, ಒಂದೇ ಉದ್ದೇಶಗಳನ್ನು ಹೊಂದಿದವರು. ಅವರು ನಾನು ಒಂದೇ ಕೇರಿ, ಬೀದಿಯಲ್ಲಿ ಓಡಾಡಿದವರು. ಆದರೆ, ಇತ್ತೀಚೆಗೆ ಅವರಿಗೆ ಆರೋಗ್ಯ ಕೆಟ್ಟಿದೆ ಎಂದು ತೀಕ್ಷ್ಣವಾಗಿ ಕುಟುಕಿದರು.