ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ: ಅಧ್ಯಕ್ಷ ನಾಗರಾಜು

Update: 2016-03-01 17:39 GMT

ಬೆಂಗಳೂರು, ಮಾ.1: ಪಶು ಆಹಾರ ಕಚ್ಚಾವಸ್ತು ಖರೀದಿಯಲ್ಲಿ 2012ರಲ್ಲಿ ನಡೆದಿದ್ದ ಅವ್ಯವಹಾರ ಸಾಬೀತಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್)ದ ಅಧ್ಯಕ್ಷ ಪಿ.ನಾಗರಾಜು ತಿಳಿಸಿದ್ದಾರೆ.
ಮಂಗಳವಾರ ಕೆಎಂಎಫ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವ್ಯವಹಾರದ ಕುರಿತು ಸಹಕಾರಿ ಸಂಘಗಳ ಜಂಟಿ ನಿಬಂಧಕ ಡಿ.ಸಿ. ದೇವರಾಜ್ ಅವರು ಇತ್ತೀಚೆಗೆ ವರದಿ ಸಲ್ಲಿಸಿದ್ದು, ವರದಿಯಲ್ಲಿ ಅಂದಿನ ಅಧಿಕಾರಿಗಳು ಶಾಮೀಲಾಗಿರುವುದು ಸಾಬೀತಾಗಿದೆ. ಮುಂದಿನ ವಾರ ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ವರದಿಯನ್ನು ಮಂಡಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
2012ರಲ್ಲಿ ನಡೆದ ಅವ್ಯವಹಾರವನ್ನು ತನಿಖೆ ನಡೆಸಬೇಕೆಂದು ಸ್ವತಃ ತಾವು ಹಾಗೂ ಇತರರು ಸೇರಿ ಅಂದಿನ ಸಚಿವರಾಗಿದ್ದ ಬಿ.ಜಿ.ಪುಟ್ಟಸ್ವಾಮಿ ಅವರಿಗೆ ಮನವಿ ಮಾಡಿದ್ದೆವು. ಆದರೆ, ಇತ್ತೀಚೆಗೆ ಕೆಲ ಮಾಧ್ಯಮದಲ್ಲಿ ಅಧ್ಯಕ್ಷರೂ ಸಹ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ತನಿಖೆ ನಡೆಸುವಂತೆ ಮನವಿ ಮಾಡಿದ್ದು ತಾವೇ ಆಗಿರುವಾಗ ನನ್ನ ಮೇಲೆ ಕೆಲವರು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ. ಸರಕಾರವೇ ನೇಮಿಸಿದ್ದ ತನಿಖಾ ತಂಡ ಇತ್ತೀಚೆಗೆ ವರದಿಯನ್ನೂ ನೀಡಿದೆ. ವರದಿ ಪ್ರಕಾರ ಭಾಗಿಯಾಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ತಪ್ಪಿತಸ್ಥರು ಯಾರು: ಅಂದಿನ ಪಶುಸಂಗೋಪನೆ ಇಲಾಖೆ ನಿರ್ದೇಶಕ ಎರ್ನೆಸ್ಟ್ ಬರ್ನಾಡ್, ಪ್ರಭಾರಿ ನಿರ್ದೇಶಕ (ಹಣಕಾಸು) ರಮೇಶ್ ಕುನ್ನೂರು, ನರಸಿಂಹರೆಡ್ಡಿ, ಗುಣಮಟ್ಟ ನಿಯಂತ್ರಣ ಅಧಿಕಾರಿ ಮುಹಮದ್ ಇಸ್ಮಾಯಿ, ಖರೀದಿ ವಿಭಾಗ ವಿಜಯ್‌ಕುಮಾರ್ ಇವರ ವಿರುದ್ಧ ಆರೋಪ ಮಾಡಲಾಗಿದೆ. ಸದ್ಯ ಈ ಎಲ್ಲಾ ಅಧಿಕಾರಿಗಳು ಇತರೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಏನಿದು ಅವ್ಯವಹಾರ: 2012 ಜುಲೈ ತಿಂಗಳಲ್ಲಿ ಅಂದಿನ ಅಧಿಕಾರಿಗಳು 20,731 ಟನ್ ಪಶು ಆಹಾರ ಕಚ್ಚಾವಸ್ತು ದಾಸ್ತಾನು ಇದ್ದರೂ, ಟನ್‌ಗೆ 27 ಸಾವಿರ ರೂ. ನೀಡಿ 28,700 ಟನ್ ದಾಸ್ತಾನು ಖರೀದಿಸಿದ್ದು, ಬರೋಬ್ಬರಿ 69 ಕೋಟಿ ರೂ. ವ್ಯಯಿಸಲಾಗಿದೆ.
ಹಸುಗಳಿಗೆ ನೀಡುವ ಆಹಾರಕ್ಕೆ ಟನ್‌ಗೆ 12 ಸಾವಿರ ರೂ.ಗೆ ನೀಡಿ ಖರೀದಿಸಲಾಗುತ್ತದೆ. ಹೆಚ್ಚೆಂದರೆ 15 ಸಾವಿರ ನೀಡಬಹುದು. ಆದರೆ, ದಾಸ್ತಾನು ಇದ್ದರೂ 27 ಸಾವಿರ ರೂ. ನೀಡಿ ಖರೀದಿಸಲಾಗಿತ್ತು. ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಅನುಮಾನ ವ್ಯಕ್ತವಾಗಿ 2012ರ ಸೆಪ್ಟೆಂಬರ್ ತಿಂಗಳಲ್ಲಿ ತನಿಖೆಗೆ ಆದೇಶಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News