ಸ್ವೀಕರ್‌ಗೆ ಸಿದ್ದರಾಮಯ್ಯ ವಾಚ್ ಹಸ್ತಾಂತರ
ಬೆಂಗಳೂರು, ಮಾ.2: ಪ್ರತಿಪಕ್ಷಗಳ ಟೀಕೆ ಮತ್ತು ಸದನದಲ್ಲಿ ಗದ್ದಲಕ್ಕೆ ಕಾರಣವಾಗಿದ್ದ ಗಿಫ್ಟ್ ವಾಚ್ ನ್ನು ಇಂದು ಮುಖ್ಯ ಮಂತ್ರಿ ಸಿದ್ದರಾಮಯ್ಯಅವರು ಸ್ವೀಕರ್ ಕಾಗೋಡ್ ತಿಮ್ಮಪ್ಪರಿಗೆ ಗೆ ಹಸ್ತಾಂತರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಾಚ್‌ನ ಜೊತೆಗೆ ದಾಖಲೆ ಪತ್ರ, ಗಿಫ್ಟ್ ನೀಡಿದವರ ವಿವರ , ತೆರಿಗೆ ಪಾವತಿ ಮತ್ತಿತರ ಮಾಹಿತಿಯನ್ನು ಸ್ವೀಕರ‍್ ಗೆ ನೀಡಿರುವ ಪತ್ರದಲ್ಲಿ ವಿವರಿಸಿದ್ದಾರೆ.
"2015ರ ಜುಲೈನಲ್ಲಿ ಸ್ನೇಹಿತ ಡಾ.ಗಿರೀಶ್ ಚಂದ್ರ ವರ್ಮಾ ಬೆಂಗಳೂರಿಗೆ ಬಂದಿದ್ದಾಗ ನನಗೆ ಹ್ಯುಬ್ಲೋಟ್ ಡೈಮಂಡ್ ವಾಚ್ ನ್ನು ಗಿಫ್ಟ್ ಆಗಿ ನೀಡಿದ್ದರು. ಇದಕ್ಕೆ ಮುಂಗಡವಾಗಿ ಮಾ.2 ರಂದು ತೆರಿಗೆ ಪಾವತಿಸಿರುವೆನು. ಮುಖ್ಯಮಂತ್ರಿಗೆ ದೊರೆತ ಗಿಫ್ಟ್ ಸರಕಾರದ ಆಸ್ತಿ ಎಂದು ಪರಿಗಣಿಸಿ ಹಸ್ತಾಂತರ ಮಾಡಿರುವೆನು ''ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ವಾಚ್ ಸ್ವೀಕರಿಸಿದ ಸ್ವೀಕರ್ ಕಾಗೋಡು ತಿಮ್ಮಪ್ಪ ' ಹ್ಯುಬ್ಲೋಟ್ ಡೈಮಂಡ್ ವಾಚ್ 'ಸದನದ ಆಸ್ತಿ ಎಂದು ಘೋಷಿಸಿದರು.ಬಳಿಕ ಸ್ವೀಕರ್ ಅವರು ವಾಚ್ ನ್ನು ಮುಖ್ಯ ಕಾರ್ಯದರ್ಶಿಗೆ ಹಸ್ತಾಂತರ ಮಾಡಿದರು.
ಇನ್ನು ಮುಂದೆ ಸದನದಲ್ಲಿ ವಾಚ್ ವಿಚಾರದಲ್ಲಿ ಚರ್ಚೆಗೆ ಅವಕಾಶವಿಲ್ಲ. ಅವಕಾಶ ನೀಡಲಾಗುವುದಿಲ್ಲ ಎಂದು ಸ್ವೀಕರ್ ಕಾಗೋಡು ಸ್ಪಷ್ಟಪಡಿಸಿದರು.
ವಾಚ್ ಹಸ್ತಾಂತರದ ಬಳಿಕವೂ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ಸದನದಲ್ಲಿ ಧರಣಿ ನಡೆಸಿದವು.ಪ್ರತಿಪಕ್ಷಗಳ ತೀವ್ರ ಗದ್ದಲದ ಹಿನ್ನೆಲೆಯಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಕಲಾಪವನ್ನು ಗುರುವಾರ ಬೆಳಗ್ಗೆ 11ಗಂಟೆಗೆ ಮುಂದೂಡಿದರು.