ಹ್ಯೂಬ್ಲೊ ಕೈಗಡಿಯಾರ ಸರಕಾರದ ಆಸ್ತಿ: ಸಿದ್ದರಾಮಯ್ಯ
ಸದನದಲ್ಲಿ ಘೋಷಣೆ
ಬೆಂಗಳೂರು, ಮಾ.2: ಸ್ನೇಹಿತನಿಂದ ಉಡುಗೊರೆ ರೂಪದಲ್ಲಿ ಪಡೆದಿದ್ದ ವಿದೇಶಿ ನಿರ್ಮಿತ ದುಬಾರಿ ‘ಹ್ಯೂಬ್ಲೊ ಬಿಗ್ ಬ್ಯಾಂಗ್-301-ಎಂ’ ಕೈಗಡಿಯಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಸರಕಾರದ ಆಸ್ತಿ’ ಎಂದು ಘೋಷಿಸಿ ಸ್ಪೀಕರ್ ಕಾಗೋಡು ತಿಮ್ಮಪ್ಪಗೆ ಹಸ್ತಾಂತರ ಮಾಡಿದ್ದಾರೆ.
ಬುಧವಾರ ಭೋಜನ ವಿರಾಮದ ಬಳಿಕ ವಿಧಾನಸಭೆ ಸಮಾವೇಶಗೊಳ್ಳುತ್ತಿದ್ದಂತೆ ಸದನದ ಬಾವಿಗಿಳಿದು ಬಿಜೆಪಿ ಸದಸ್ಯರು ಕೈಗಡಿಯಾರದ ಕುರಿತು ಚರ್ಚೆಗೆ ಅವಕಾಶ ಕೋರಿ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲೇ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ, ಘೋಷಣಾ ಪತ್ರದೊಂದಿಗೆ ಕೈಗಡಿಯಾರವನ್ನು ಸ್ಪೀಕರ್‌ಗೆ ಹಸ್ತಾಂತರಿಸಿದರು.
ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾಗಿರುವ ನನ್ನ ಸ್ನೇಹಿತ ಡಾ.ಗಿರೀಶ್‌ಚಂದ್ರವರ್ಮ ಕಳೆದ ಸಾಲಿನ ಜುಲೈನಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಕೈಗಡಿಯಾರವನ್ನು ನನಗೆ ಬಲವಂತವಾಗಿ, ಸ್ನೇಹಪೂರ್ವಕವಾಗಿ ನೀಡಿದ್ದರು.
ಅವರಿಗೆ ರಾಜ್ಯ ಸರಕಾರ ಅಥವಾ ಸರಕಾರದ ಯಾವುದೇ ಸಂಸ್ಥೆಗಳೊಂದಿಗೆ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಣೆ ನೀಡಿದರು.
ಡಾ.ಗಿರೀಶ್‌ಚಂದ್ರವರ್ಮ ವಿದೇಶಿ ಪ್ರಜೆಯಲ್ಲ, ಅನಿವಾಸಿ ಭಾರತೀಯರಾಗಿರು ವುದರಿಂದ ಉಡುಗೊರೆ ನೀಡಲು ಅವರಿಗೆ ಅರ್ಹತೆಯಿದೆ. ಅಲ್ಲದೆ, ಈ ಕೈಗಡಿಯಾರಕ್ಕೆ ಸಂಬಂಧಿಸಿದಂತೆ ಫೆ.22ರಂದು ಪ್ರಮಾಣಪತ್ರವನ್ನು ಮಾಡಿಸಿಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು. ಉಡುಗೊರೆ ರೂಪದಲ್ಲಿ ಬಂದಿರುವ ಈ ಕೈಗಡಿಯಾರಕ್ಕೆ ನಾನು ಇಂದು ಮುಂಗಡವಾಗಿ ತೆರಿಗೆಯನ್ನು ಪಾವತಿಸಿ ಈ ಹಿಂದಿನ ಸಂಪ್ರದಾಯದಂತೆ ಅದನ್ನು ಸರಕಾರದ ಆಸ್ತಿ ಎಂದು ಘೋಷಿಸಿ ತಮ್ಮ ಮೂಲಕ ಸರಕಾರಕ್ಕೆ ಹಸ್ತಾಂತರ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಘೋಷಿಸಿದರು.
ನಾನು ಯಾವುದೇ ಕಾನೂನನ್ನು ಉಲ್ಲಂಘನೆ ಮಾಡಿಲ್ಲ, ಅಕ್ರಮ ಮಾಡಿಲ್ಲ, ಲೂಟಿ ಮಾಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ. ಕಳೆದ 33 ವರ್ಷಗಳ ನನ್ನ ಸಾರ್ವಜನಿಕ ಜೀವನದಲ್ಲಿ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದೇನೆ. ಒಂದೇ ಒಂದು ಕಪ್ಪುಚುಕ್ಕೆ ಬರದಂತೆ ನಡೆದುಕೊಂಡಿದ್ದೇನೆ ಎಂದು ಅವರು ಹೇಳಿದರು.
ನನ್ನ ಜೀವನ ತೆರೆದ ಪುಸಕ್ತದಂತಿದ್ದು, ಆತ್ಮ ಪರಿಶುದ್ಧವಾಗಿದೆ. ಆದರೂ, ರಾಜಕೀಯ ಕಾರಣಕ್ಕಾಗಿ ಸರಕಾರ ಹಾಗೂ ನನ್ನ ತೇಜೋವಧೆ ಮಾಡಿ, ಕಳಂಕ ತರಲು ಷಡ್ಯಂತ್ರವನ್ನು ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುವ ಸಂದರ್ಭದಲ್ಲಿ ಅನೇಕ ವಿಷಯಗಳನ್ನು ಪ್ರಸ್ತಾಪ ಮಾಡಲು ವಿರೋಧ ಪಕ್ಷಗಳಿಗೆ ಅವಕಾಶವಿತ್ತು. ಸರಕಾರದ ವಿರುದ್ಧ ಆಪಾದನೆಗಳು ಮಾಡಲು ವಿರೋಧ ಪಕ್ಷಗಳಿಗೆ ಯಾವುದೇ ವಿಷಯಗಳಿಲ್ಲ. ಆದುದರಿಂದ, ಸದನದ ಅಮೂಲ್ಯ ಸಮಯವನ್ನು ಈ ರೀತಿ ಹಾಳು ಮಾಡುತ್ತಿವೆ ಎಂದು ಅವರು ಟೀಕಿಸಿದರು.
♦♦♦
ಕೈಗಡಿಯಾರ ಸಿಎಸ್‌ಗೆ ಹಸ್ತಾಂತರಿಸಿದ ಸ್ಪೀಕರ್
ಬೆಂಗಳೂರು, ಮಾ.2: ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಸರಕಾರದ ಆಸ್ತಿ ಎಂದು ಘೋಷಿಸಿ ತಮಗೆ ಹಸ್ತಾಂತರಿಸಿದ್ದ ‘ಹ್ಯೂಬ್ಲೊ ಬಿಗ್ ಬ್ಯಾಂಗ್-301-ಎಂ’ ಕೈಗಡಿಯಾರವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಸರಕಾರದ ಮುಖ್ಯಕಾರ್ಯದರ್ಶಿಗೆ ಹಸ್ತಾಂತರಿಸಿದರು.
ವಿಧಾನಸಭೆಯ ಕಲಾಪ ಮುಂದೂಡಲ್ಪಟ್ಟ ನಂತರ ವಿಧಾನಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಸಚಿವ ಸಂಪುಟದ ಸಭಾಭವನದಲ್ಲಿ ಮುಖ್ಯಮಂತ್ರಿ ನೀಡಿರುವ ಪತ್ರದೊಂದಿಗೆ ಸಂರಕ್ಷಿಸಿಡುವಂತೆ ಸೂಚಿಸಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅರವಿಂದಜಾಧವ್‌ಗೆ ಕೈಗಡಿಯಾರವನ್ನು ಹಸ್ತಾಂತರ ಮಾಡಿದರು.
ಮುಖ್ಯಮಂತ್ರಿ ತಮಗೆ ಹಸ್ತಾಂತರ ಮಾಡಿರುವ ಕೈಗಡಿಯಾರಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳ ಅಗತ್ಯವಿಲ್ಲ. ಸದನದಲ್ಲಿ ನಮಗೆ ನೀಡಿರುವ ಕೈಗಡಿಯಾರವನ್ನು ಅವರ ಆಶಯದಂತೆ ಸಚಿವ ಸಂಪುಟದ ಸಭಾಭವನದಲ್ಲಿ ಸಂರಕ್ಷಿಸಿಡಲು ಮುಖ್ಯಕಾರ್ಯದರ್ಶಿಗೆ ಹಸ್ತಾಂತರ ಮಾಡಲಾಗಿದೆ ಎಂದು ಸ್ಪೀಕರ್ ತಿಳಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲಿ ಈ ಎಲ್ಲ ವಿಚಾರಗಳನ್ನು ವಿರೋಧ ಪಕ್ಷಗಳು ಪ್ರಸ್ತಾಪ ಮಾಡಬಹುದಿತ್ತು. ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೋರಿ ಬಿಜೆಪಿ ಸಲ್ಲಿಸಿದ್ದ ಮನವಿಯನ್ನು ಈಗಾಗಲೇ ತಿರಸ್ಕರಿಸಿದ್ದೇನೆ. ಅದನ್ನು ಪುನರ್‌ಪರಿಶೀಲನೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ವಿಧಾನಸಭೆಯ ಸರಕಾರದ ಮುಖ್ಯಸಚೇತಕ ಅಶೋಕ್‌ಪಟ್ಟಣ್ ಉಪಸ್ಥಿತರಿದ್ದರು.
♦♦♦
ಸ್ಪೀಕರ್‌ರನ್ನು ಮುಖ್ಯಮಂತ್ರಿಗಳು ಪೋಸ್ಟ್‌ಮನ್ ಥರ ಬಳಸಿಕೊಂಡಿದ್ದಾರೆ. ಇದಕ್ಕೆ ನಮ್ಮ ಆಕ್ಷೇಪವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿವಾದಿತ ವಾಚ್‌ನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪನವರಿಗೆ ಕೊಟ್ಟಿದ್ದು ಕಾನೂನು ಪ್ರಕಾರ ಸರಿಯಲ್ಲ. ಅವರು ಕೊಡಬೇಕಾಗಿದ್ದುದು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ.
-ಜಗದೀಶ್ ಶೆಟ್ಟರ್, ವಿರೋಧ ಪಕ್ಷದ ನಾಯಕ