×
Ad

"ಯೂತ್ ಐಕಾನ್" ಆಗಿ ಹೊರಹೊಮ್ಮಿದ ಕನ್ಹಯ್ಯಾ ಕುಮಾರ್ -ಸಮದ್ ಬಿ.ಸಿ

Update: 2016-03-05 12:20 IST

ಸರಿಸುಮಾರು ಫೆಬ್ರವರಿ ತಿಂಗಳ ಮಧ್ಯಭಾಗದವರೆಗೆ ಈ ದೇಶದ ಜನತೆಗೆ 'ಕನ್ಹಯ್ಯಾ' ಎನ್ನುವ ವಿದ್ಯಾರ್ಥಿ ಬರೀ ವಿದ್ಯಾರ್ಥಿಯಷ್ಟೇ ಆಗಿದ್ದ. ಬೇರೇನೂ ಆಗಿರಲಿಲ್ಲ. ನಂತರದ 15 ದಿವಸದ ಅಂತರದಲ್ಲಿ ಭಾರತದ ಮಟ್ಟಿಗೆ ಯುವ ನಾಯಕನಾಗಿ ಬೆಳೆದಿದ್ದಾರೆ.

JNU ಕ್ಯಾಂಪಸ್ ನಲ್ಲಿ ಸೆಮಿನಾರ್ ವಿಷಯವೊಂದರಲ್ಲಿ ಕ್ಯಾಂಪಸಲ್ಲಿ ಹುಲಿಯಾಗಿದ್ದ ಕನ್ಹಯ್ಯಾ ಎನ್ನುವ ವಿದ್ಯಾರ್ಥಿ ನಾಯಕನನ್ನು ಸರಕಾರದ ಒತ್ತಡದೊಂದಿಗೆ 'ದೇಶದ್ರೋಹ(?)'ದ  ಕೇಸು ಜಡಿದು ಆತನನ್ನು ಇಲಿಯಾಗಿಸಲು ನೋಡಿ ಇಡೀ ದೇಶವೇ ಆತನ ಬೆನ್ನ ಹಿಂದೆ ನಿಂತಾಗ ಆತ ಹೆಬ್ಬುಲಿಯಾಗಿ ಹೊರಬಂದು ಭಾಷಣ ಮಾಡಿದಾಗ ಸರಕಾರ ಪೇಚಿಗೆ ಸಿಲುಕಿತು.

ನಿಜವಾಗಿಯೂ ಕನ್ಹಯ್ಯಾ ಮಾಡಿದ ತಪ್ಪಾದರೂ ಏನು? ಸ್ವಾತಂತ್ರ್ಯ ಭಾರತದಲ್ಲಿದ್ದುಕೊಂಡು ತನಗಿನ್ನೂ ನಿಜವಾಗಿ ದಕ್ಕಬೇಕಾದ ಸ್ವಾತಂತ್ರ್ಯ ನನಗಿನ್ನೂ ದಕ್ಕಿಲ್ಲ ಎಂದು ಭಾರತದ ಸ್ವಾತಂತ್ರ್ಯ ನಿರಾಕರಿಸಲ್ಪಟ್ಟ ಸಮುದಾಯಗಳ ಪರವಾಗಿ ಮಾತನಾಡಿದ್ದು ತಪ್ಪೇ? ಹೆಚ್ಚೇನೂ ಬೇಡ. ಒಂದು ವರ್ಷದಿಂದೀಚೆಗಿನ ಭಾರತದ ಸ್ಥಿತಿಗತಿಯನ್ನು ಗಮನಿಸಿದಾಗ ಇಲ್ಲಿ ತಪ್ಪನ್ನು ತಪ್ಪು ಎಂದೂ ಸರಿಯನ್ನು ಸರಿ ಎಂದೂ ಮಾತನಾಡುವ ಸ್ವಾತಂತ್ರ್ಯ ಸಿಕ್ಕಿಲ್ಲ. ಅದಲ್ಲದೆ ಭಾರತದಲ್ಲಿ ಬೇರೂರಿರುವ ಜಾತೀಯತೆ, ಅಸ್ಪೃಷ್ಯತೆ, ದಲಿತ-ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ.

ಇದನ್ನೆಲ್ಲಾ ಮನಗಂಡ ವಿದ್ಯಾರ್ಥಿ ನಾಯಕನೊಬ್ಬ ತನ್ನ ಭಾಷಣದಲ್ಲಿ  ಇಂತಹ ಅಸಹಿಷ್ಣು ಸಮಾಜ , ಅಸಮಾನತೆಗಳನ್ನು ತೊಡೆದು ಹಾಕಬೇಕೆಂದು ಭಾಷಣ ಮಾಡಿದ್ದು , ಇದು ಹೀಗೆ ಮುಂದುವರಿದಲ್ಲಿ ತಮ್ಮ ಸರಕಾರಕ್ಕೂ ಅಪಾಯವಿದೆಯೆಂದು ಭಾವಿಸಿ ಇಂತಹ ವ್ಯಕ್ತಿಗಳನ್ನು ಜೈಲಿಗೆ ತಳ್ಳಿ ನೆಮ್ಮದಿಯಲ್ಲಿರಬಹುದೆಂದು ತಿರುಕನ ಕನಸು ಕಂಡವರಿಗೆ  ಅದು ಕನಸಾಗಿಯೇ ಉಳಿಯುವಂತೆ ಮಾಡಿದ ಭಾರತ ದೇಶದ ಕೋಟ್ಯಂತರ ಪ್ರಜೆಗಳು ದೇಶಪ್ರೇಮಿಗಳೇ ನಿಜ. ಒಂದು ಕನ್ಹಯ್ಯಾ ಕುಮಾರ್ ಪರವಾಗಿ ಇಲ್ಲಿ ಲಕ್ಷಾಂತರ ಕನ್ಹಯ್ಯಾರು ಬಂದರು. ಇದು ಶ್ರೇಷ್ಠ ಭಾರತವೇ ಸರಿ.


      ಇನ್ನು ಯುವ ಜನಾಂಗವೇ ಹೆಚ್ಚಾಗಿರುವ ಭಾರತದಲ್ಲಿ ಯುವ ಜನತೆಯನ್ನು ತನ್ನತ್ತ ಸೆಳೆಯಲು ಸಾಧ್ಯವಾದರೆ ಆತ ಭಾರತದ ಪಾಲಿಗೆ ಹೀರೋ ಆಗಿಬಿಡುತ್ತಾನೆಂದು ನಮಗೆ ಇತಿಹಾಸ ತೋರಿಸಿದೆ. ಪಾರದರ್ಶಕ ಆಡಳಿತಕ್ಕೆ ಜನಲೋಕಪಾಲ ಮಸೂದೆ ಜಾರಿಯಾಗಬೇಕೆಂದು ರಂಗಕ್ಕಿಳಿದ ಅಣ್ಣಾ ಹಝಾರೆಯವರು ಮೊದಲನೆಯದಾಗಿ ಭ್ರಷ್ಟ ಸರಕಾರದಿಂದ ನೊಂದಿದ್ದ ಯುವ ಜನತೆಯನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿ ಮುಂದೆ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದ ರಾಷ್ಟ್ರೀಯ ಪಕ್ಷದ ಬಲವನ್ನು ಪ್ರಾದೇಶಿಕ ಪಕ್ಷದ ಬಲಕ್ಕೆ ಇಳಿಸಿರುವುದನ್ನು ಗಮನಿಸಬಹುದು. ಮುಂದೆ ರಾಜಕೀಯಕ್ಕೆ ಧುಮುಕಿದ ತನ್ನ ಸಹವರ್ತಿಗಳಿಂದ ಮೂಲೆಗುಂಪಾಗಿ ಮುಂದೆ ಅವರ ಲೋಕಪಾಲ ಪರ ಧ್ವನಿ ಕ್ಷೀಣಿಸಿದವು. 


    ಹಾಗೆಯೇ, ಕನ್ಹಯ್ಯಾ ಕುಮಾರ್ ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಯಾಗಿರದೆ ಇದ್ದರೆ, ಆತನ " ನಮಗೆ ಭಾರತದಿಂದ ಅಝಾದಿ ಬೇಡ- ಭಾರತದಲ್ಲಿ ಅಝಾದಿ ಬೇಕು " ಎಂಬ ಸಂದರ್ಭೋಚಿತ ಬೇಡಿಕೆಗೆ ಈ ಭಾರತದ ಈ ಭಾರತದ ಪವಿತ್ರ ಸಂವಿಧಾನದ ಮೇಲೆ ವಿಶ್ವಾಸವಿರುವ ಭಾರತದ ಕೊಟ್ಯಂತರ  ಪ್ರೌಢ ಪ್ರಜೆಗಳ ಬೆಂಬಲವಿರಬಹುದು.

 
ಕಾಲೇಜಲ್ಲಿ ವ್ಯಾಸಂಗ ಮುಗಿಸಿ ಎಲ್ಲಿಯೋ ಇರಬೇಕಾದ ಕನ್ಹಯ್ಯಾ ಕುಮಾರ್ ಎನ್ನುವ ವಿದ್ಯಾರ್ಥಿಯನ್ನು ಸರಿಯಾದ ಸಮಯದಲ್ಲಿ ಹೊರತಂದು ದೇಶದ ಜನತೆಗೆ  " ಯೂತ್ ಐಕಾನ್"  ಆಗಿ ಪರಿಚಯಿಸಿದ ಸರಕಾರಕ್ಕೂ, ಮಂತ್ರಿಗಳಿಗೂ, ನಕಲಿ ವೀಡಿಯೋ ಟೆಲಿಕಾಸ್ಟ್ ಮಾಡಿದ ಮಾಧ್ಯಮಗಳಿಗೂ ಅಭಿನಂದನೆಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor