21 ಗಂಟೆ ಮಾತ್ರ ನಡೆದ ಕಲಾಪ
ಬೆಂಗಳೂರು, ಮಾ.5: ಫೆ.29ರಿಂದ ಮಾ.5ರವರೆಗೆ ನಡೆದ ವರ್ಷದ ಮೊದಲ ಅಧಿವೇಶನದಲ್ಲಿ ಕೇವಲ 21 ಗಂಟೆ 27 ನಿಮಿಷಗಳ ಕಾಲ ಮಾತ್ರ ವಿಧಾನಸಭೆಯ ಕಾರ್ಯಕಲಾಪಗಳು ನಡೆದಿವೆ. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಪ್ರಸ್ತಾವದ ಮೇಲೆ 9 ಗಂಟೆ 23 ನಿಮಿಷಗಳ ಕಾಲ ಚರ್ಚೆಯಾಗಿದ್ದು, 10 ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು. ಮಾ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ ನಂತರ ವಂದನಾ ನಿರ್ಣಯದ ಪ್ರಸ್ತಾವನೆಯು ಅಂಗೀಕೃತವಾಗಿದೆ.
ಈ ಅಧಿವೇಶನದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಮಾಜಿ ಶಾಸಕರಾದ ಎಚ್.ಜಿ.ಗೋವಿಂದೇಗೌಡ, ಎಂ.ಎಂ.ನಾಣಯ್ಯ, ಟಿ.ಜಿ.ತಿಮ್ಮೇಗೌಡ, ಶರಣಬಸಪ್ಪ ಮಾಲಿ ಪಾಟೀಲ್ ದಂಗಾಪುರ, ಸಾಹಿತಿ ಡಾ.ಸಾ.ಶಿ.ಮರುಳಯ್ಯ, ಚಲನಚಿತ್ರ ನಿರ್ದೇಶಕ ಗೀತಪ್ರಿಯ, ಹುತಾತ್ಮ ಯೋಧರಾದ ಹನುಮಂತಪ್ಪ ಕೊಪ್ಪದ್, ನಾಗೇಶ್, ಪಿ.ಎನ್.ಮಹೇಶ್ ಸೇರಿದಂತೆ ಇನ್ನಿತರರಿಗೆ ಸಂತಾಪ ನಿರ್ಣಯ ಮಂಡಿಸಿ ಅಂಗೀಕರಿಸಲಾಗಿದೆ.
70 ವಾರ್ಷಿಕ ವರದಿಗಳು, 73 ಲೆಕ್ಕ ಪರಿಶೋಧನಾ ವರದಿಗಳು ಹಾಗೂ 7 ಅಧಿಸೂಚನೆಗಳು ಮತ್ತು 3 ಲೆಕ್ಕ ಪರಿಶೋಧನಾ ವರದಿ ಸೇರಿದಂತೆ ಒಟ್ಟು 146 ಕಾಗದ ಪತ್ರಗಳನ್ನು ಸಭೆಯ ಮುಂದಿಡಲಾಗಿದೆ. 2014-15ನೆ ಸಾಲಿನ ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳನ್ನು(ಭಾಗ-1 ಮತ್ತು ಭಾಗ-2), ಆರ್ಥಿಕ ವಲಯ(ಸಂಖ್ಯೆ-2) ಮತ್ತು ರಾಜಸ್ವ ವಿಭಾಗ ಮೇಲಿನ ವರದಿ(ಸಂಖ್ಯೆ-3)ಯನ್ನು ಸದನಕ್ಕೆ ಒಪ್ಪಿಸಲಾಗಿದೆ.
ಅಲ್ಲದೆ, ಇದೇ ತಿಂಗಳಿಗೆ ಕೊನೆಗೊಂಡ ಆರ್ಥಿಕ ವರ್ಷಕ್ಕೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ನೀಡಿರುವ ಸಾರ್ವಜನಿಕ ವಲಯ ಉದ್ಯಮಗಳ ಮೇಲಿನ ವರದಿ(ಸಂಖ್ಯೆ-3)ನ್ನು ಸದನಕ್ಕೆ ಒಪ್ಪಿಸಲಾಗಿದೆ. ಈ ಅಧಿವೇಶನದಲ್ಲಿ ನಿಯಮ 60ರ ಮೇರೆಗೆ 4 ಸೂಚನೆಗಳನ್ನು ಸ್ವೀಕರಿಸಿ, ಒಂದು ಸೂಚನೆಗೆ ಸಭಾಧ್ಯಕ್ಷರು ತೀರ್ಪು ನೀಡಿದ್ದಾರೆ.
ಎರಡು ಸೂಚನೆಗಳನ್ನು ನಿಯಮ 69ಕ್ಕೆ ವರ್ಗಾಯಿಸಿ ಚರ್ಚಿಸಲಾಗಿದೆ ಮತ್ತು ಒಂದು ತಿರಸ್ಕೃತಗೊಂಡಿದೆ. ನಿಯಮ 69ರಡಿ 5 ಸೂಚನೆಗಳು ಸ್ವೀಕರಿಸಲಾಗಿದ್ದು ಎಲ್ಲ ಸೂಚನೆಗಳನ್ನು ಚರ್ಚಿಸಿ ಉತ್ತರಿಸಲಾಗಿದೆ. ಪ್ರಸಕ್ತ ಅಧಿವೇಶನದಲ್ಲಿ ಶೂನ್ಯವೇಳೆಯಲ್ಲಿ 15 ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.
ಈ ಅವಧಿಯಲ್ಲಿ ಒಟ್ಟು 818 ಪ್ರಶ್ನೆಗಳ ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ 737 ಪ್ರಶ್ನೆಗಳ ಸೂಚನೆಗಳನ್ನು ಅಂಗೀಕರಿಸಲಾಗಿದೆ. ಅವುಗಳ ಪೈಕಿ ಸದನದಲ್ಲಿ ಉತ್ತರಿಸುವ 60 ಪ್ರಶ್ನೆಗಳು ಹಾಗೂ ಲಿಖಿತ ಮೂಲಕ ಉತ್ತರಿಸುವ 672 ಪ್ರಶ್ನೆಗಳಿವೆ.
ಸದನದಲ್ಲಿ ಉತ್ತರಿಸಲು ತೀರ್ಮಾನಿಸಲಾಗಿದ್ದ 60 ಪ್ರಶ್ನೆಗಳ ಪೈಕಿ 58 ಪ್ರಶ್ನೆಗಳಿಗೆ ಉತ್ತರಗಳನ್ನು ಹಾಗೂ ಲಿಖಿತ ಮೂಲಕ ಉತ್ತರಿಸುವ 672 ಪ್ರಶ್ನೆಗಳ ಪೈಕಿ 581 ಪ್ರಶ್ನೆಗಳಿಗೆ ಉತ್ತರಗಳನ್ನು ಸರಕಾರದಿಂದ ಸ್ವೀಕರಿಸಲಾಗಿದೆ. ಮೂರು ಪ್ರಶ್ನೆಗಳ ಸೂಚನಾ ಪತ್ರಗಳು ತಿರಸ್ಕೃತಗೊಂಡಿವೆ. ಹಾಗೂ 81 ಪ್ರಶ್ನೆಗಳ ಸೂಚನಾ ಪತ್ರಗಳು ಹೆಚ್ಚುವರಿಯಾಗಿವೆ.
ನಿಯಮ 73ರ ಗಮನ ಸೆಳೆಯುವ ಸೂಚನೆಗಳಲ್ಲಿ 54 ಸೂಚನಾ ಪತ್ರಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 15 ಸೂಚನೆಗಳು ಚರ್ಚೆಯಾಗಿವೆ. ನಿಯಮ 351ರಡಿಯಲ್ಲಿ ಒಟ್ಟು 63 ಸೂಚನೆಗಳು ಸ್ವೀಕೃತವಾಗಿದ್ದು, ಇದರಲ್ಲಿ 50 ಸೂಚನೆಗಳು ಅಂಗೀಕೃತಗೊಂಡಿದ್ದು, 24 ಸೂಚನೆಗಳಿಗೆ ಸರಕಾರದಿಂದ ಉತ್ತರಗಳನ್ನು ಸ್ವೀಕರಿಸಲಾಗಿದೆ. ಒಂದು ಖಾಸಗಿ ನಿರ್ಣಯವನ್ನು ಸ್ವೀಕರಿಸಲಾಗಿದ್ದು, ಅದನ್ನು ಸದನದಲ್ಲಿ ಮಂಡಿಸಲಾಗಿದೆ. ಈ ಅಧಿವೇಶನದಲ್ಲಿ ಎಂಟು ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ ಮತ್ತು ಎರಡು ವಿಧೇಯಕಗಳನ್ನು ಹಿಂಪಡೆಯಲಾಗಿದೆ.