ಸಿಎಂ ತೇಜೋವಧೆಗೆ ಯತ್ನಿಸಿಲ್ಲ: ಕುಮಾರಸ್ವಾಮಿ
Update: 2016-03-05 22:30 IST
ಬೆಂಗಳೂರು, ಮಾ.5: ದುಬಾರಿ ಕೈಗಡಿಯಾರದ ವಿಚಾರವನ್ನು ಮುಂದಿಟ್ಟುಕೊಂಡು ನಾವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆ ಮಾಡುವ ಪ್ರಯತ್ನವನ್ನು ಮಾಡಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಣೆ ನೀಡಿದ್ದಾರೆ.
ಶನಿವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೈಗಡಿಯಾರದ ಕುರಿತು ಗೊಂದಲಮಯವಾದ ಹೇಳಿಕೆಗಳನ್ನು ನೀಡುವ ಮೂಲಕ ಸ್ವತಃ ಮುಖ್ಯಮಂತ್ರಿಯೇ ತಮ್ಮ ತೇಜೋವಧೆಯನ್ನು ಮಾಡಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸರಕಾರದಲ್ಲಿ ಪಾಲುದಾರರಾಗಿದ್ದ ಬಿಜೆಪಿಯವರೆ ನನ್ನ ಮೇಲೆ 150 ಕೋಟಿ ರೂ.ಲಂಚದ ಆರೋಪವನ್ನು ಹೊರಿಸಿದರು. ಆ ಸಂದರ್ಭದಲ್ಲಿ ಯಾರ ನೆರವನ್ನು ಪಡೆಯದೆ ಏಕಾಂಗಿಯಾಗಿ ಸವಾಲನ್ನು ಎದುರಿಸಿದೆ ಎಂದು ಕುಮಾರಸ್ವಾಮಿ ಹೇಳಿದರು.