ನಮ್ಮದು ಕ್ರಿಯಾಶೀಲ ಸರಕಾರ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಮಾ. 5: ಬೆಂಗಳೂರು ನಗರ ಜಿಲ್ಲೆಯಲ್ಲಿ ಭೂಗಳ್ಳರಿಂದ ಒತ್ತುವರಿಯಾಗಿದ್ದ 1 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ 5,211 ಎಕರೆ ಸರಕಾರಿ ಭೂಮಿಯನ್ನು ತೆರವುಗೊಳಿಸಲಾಗಿದೆ. ಆದ್ದರಿಂದ ನಮ್ಮದು ನಿಷ್ಕ್ರಿಯ ಸರಕಾರ ಎಂಬ ವಿಪಕ್ಷಗಳ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ, ತಮ್ಮದು ಕ್ರಿಯಾಶೀಲ ಸರಕಾರ ಎಂದು ಹೇಳಿದ್ದಾರೆ.
ಶನಿವಾರ ವಿಧಾನಸಭೆಯಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿ, ವಿಪಕ್ಷ ಸದಸ್ಯರ ಆಕ್ಷೇಪಗಳಿಗೆ ಉತ್ತರ ನೀಡಿದ ಅವರು, ತಮ್ಮದು ನಿಷ್ಕ್ರಿಯ ಸರಕಾರ, ಈ ಸರಕಾರ ಇನ್ನೂ ಟೇಕಾಫ್ ಆಗಿಲ್ಲ ಎಂದು ಆರೋಪಿಸಿದ್ದಾರೆ. ಆದರೆ, ತಮ್ಮ ಸರಕಾರ ಅಸ್ತಿತ್ವಕ್ಕೆ ಬಂದು ತಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಚುನಾವಣಾ ಪೂರ್ವದಲ್ಲಿ ಆಶ್ವಾಸನೆ ನೀಡಿದ 165ರ ಪೈಕಿ 6 ಭರವಸೆಗಳನ್ನು ಅದೇ ದಿನ ಘೋಷಿಸಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ರಾಜ್ಯದ 1 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅನುಕೂಲವಾಗುವ ಅನ್ನಭಾಗ್ಯ, ಅಂಗನವಾಡಿ ಮಕ್ಕಳೂ ಒಳಗೊಂಡಂತೆ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ಕೋಟಿಗೂ ಹೆಚ್ಚು ಮಕ್ಕಳಿಗೆ ಕ್ಷೀರಭಾಗ್ಯ, ಸ್ವಯಂ ಉದ್ಯೋಗ ಯೋಜನೆಯಡಿ ಎಸ್ಸಿ-ಎಸ್ಸಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವರ್ಗದವರು ಪಡೆದ ಸಾಲ ಮನ್ನಾ, ಋಣಮುಕ್ತ ಭಾಗ್ಯ, ಮನೆ ನಿರ್ಮಾಣಕ್ಕೆ ಸಹಾಯ ಧನ ಒದಗಿಸುವ ಸೂರುಭಾಗ್ಯ ಸೇರಿದಂತೆ ಆರು ಪ್ರಮುಖ ಭರವಸೆಗಳನ್ನು ಈಡೇರಿಸುವ ದಿಟ್ಟ ನಿರ್ಧಾರ ಕೈಗೊಂಡದ್ದು, ತಮ್ಮ ಸರಕಾರ ಟೇಕಾಫ್ ಆಗದಿದ್ದಲ್ಲಿ ಸಾಧ್ಯವಾಗುತ್ತಿತ್ತೇ ಎಂದು ತೀಕ್ಷ್ಣವಾಗಿ ವಿಪಕ್ಷ ಸದಸ್ಯರನ್ನು ಸಿದ್ಧರಾಮಯ್ಯ ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಆಡಳಿತಕ್ಕೆ ಬರುವ ಮುನ್ನ ನೀಡಿದ್ದ 165 ಆಶ್ವಾಸನೆಗಳ ಪೈಕಿ ತಮ್ಮ ಸರಕಾರದ ಮೂರು ಆಯವ್ಯಯಗಳಲ್ಲಿ ನೂರು ಭರವಸೆಗಳನ್ನು ಈಡೇರಿಸಿ, ನುಡಿದಂತೆ ನಡೆದಿದ್ದೇವೆ ಎಂದ ಅವರು, ಯೋಜನೆಗಳ ಅನುಷ್ಠಾನದಲ್ಲಿನ ಕೆಲ ಲೋಪಗಳನ್ನು ಸರಿಪಡಿಸಿಕೊಂಡು ಮತ್ತಷ್ಟು ಪರಿಣಾಮಕಾರಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇವೆ ಎಂದರು.
ಕ್ರಾಂತಿಕಾರಿ: ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆ (ಎಸ್‌ಸಿಪಿ-ಟಿಎಸ್ಪಿ)ಯಡಿ ಎಸ್ಟಿ-ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಯೋಜನಾ ವೆಚ್ಚದಲ್ಲಿ ಶೇ. 24.1ರಷ್ಟು ಅನುದಾನವನ್ನು ಮೀಸಲಿರಿಸಿದೆ. ಅಲ್ಲದೆ, ಅದನ್ನು ಆ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಬಳಕೆ ಮಾಡುವ ಕ್ರಾಂತಿಕಾರಕ ಕಾಯಿದೆ ರೂಪಿಸಿದ ಕೀರ್ತಿ ತಮ್ಮ ಸರಕಾರದ್ದಾಗಿದೆ.
ಇದರಿಂದ ಈ ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿರಿಸಲಾಗಿದ್ದ ಅನುದಾನ ದುಪ್ಪಟ್ಟಾಗಿದೆ. ಮೊದಲು 2013-14ರಲ್ಲಿ ಈ ಯೋಜನೆಯಡಿ ಮೀಸಲಿದ್ದ ಅನುದಾನ 8,616 ಕೋಟಿ ರೂ., 2014-15ರಲ್ಲಿ ಈ ಮೊತ್ತ 15,834 ಕೋಟಿ ರೂ.ಆಯಿತು. ಪ್ರಸಕ್ತ 2015-16ರ ಸಾಲಿನಲ್ಲಿ ಈ ಮೊತ್ತ 16,356 ಕೋಟಿ ರೂ.ಗಳಾಗಲಿದೆ ಎಂದು ಸಿದ್ಧರಾಮಯ್ಯ ಅಂಕಿ-ಅಂಶಗಳನ್ನು ನೀಡಿದರು.
ಹೈ.ಕ.ಪ್ರದೇಶಕ್ಕೆ ಸಂವಿಧಾನದ ಪರಿಚ್ಛೇಧ 371 ‘ಜೆ’ ಅನ್ವಯ ವಿಶೇಷ ಸ್ಥಾನ ದೊರಕಿಸಿಕೊಡುವಲ್ಲಿ ತಮ್ಮ ಪಕ್ಷದ ಮುಖಂಡರ ಮನವಿಗೆ ಸ್ಪಂದಿಸಿದ ಅಂದಿನ ಯುಪಿಎ ಸರಕಾರ ಮಹತ್ತರ ಪಾತ್ರ ವಹಿಸಿದೆ. ಅಲ್ಲದೆ, ಈ ಪ್ರದೇಶಕ್ಕೆ ಸಂವಿಧಾನ ಬದ್ಧವಾಗಿ ದೊರಕಿಸಿಕೊಡಬೇಕಾದ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ತಮ್ಮ ಸರಕಾರ ಸ್ಪಂದಿಸುತ್ತಿದೆ. ಅಲ್ಲದೆ, ಈ ಪ್ರದೇಶ ಅಭಿವೃದ್ಧಿಗಾಗಿ 2015-16ರಲ್ಲಿ 1,750ಕೋಟಿ ರೂ.ಅನುದಾನ ಒದಗಿಸಿ, 830ಕೋಟಿ ರೂ.ಬಿಡುಗಡೆ ಮಾಡಲಾಗಿದ್ದು, ಅರ್ಧದಷ್ಟು ಅನುದಾನ ವೆಚ್ಚ ಮಾಡಲಾಗಿದೆ ಎಂದು ಅವರು ತಿಳಿಸಿದರು.
4.5 ಲಕ್ಷ ಮನೆ ನಿರ್ಮಾಣ ಗುರಿ: ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆ ವ್ಯಾಪ್ತಿಯ 1.5ಲಕ್ಷ ಮನೆ ಸೇರಿದಂತೆ 4.5ಲಕ್ಷ ಮನೆಗಳ ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದ ಅವರು, 5 ವರ್ಷಗಳಲ್ಲಿ 15ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕ್ರಿಯಾಶೀಲತೆಗೆ ಸಾಕ್ಷಿ: ಕಾವೇರಿ ಹಾಗೂ ಕೃಷ್ಣಾ ಕೊಳ್ಳದ ಎಲ್ಲ ನೀರಾವರಿ ಯೋಜನೆಗಳಿಗೆ ವಾರ್ಷಿಕ 10ಸಾವಿರ ಕೋಟಿ ರೂ.ನಂತೆ 50 ಸಾವಿರ ಕೋಟಿ ರೂ.ವೆಚ್ಚ ಮಾಡುವ ನಿರ್ಧಾರ ಕೈಗೊಂಡ ತಮ್ಮ ಸರಕಾರ ಯೋಜಿಸಿದಂತೆಯೇ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಇವೆಲ್ಲವೂ ತಮ್ಮ ಸರಕಾರದ ಕ್ರಿಯಾಶೀಲತೆಗೆ ಸಾಕ್ಷಿಯಲ್ಲವೇ? ಎಂದು ಸಿದ್ಧರಾಮಯ್ಯ ಸವಾಲು ಹಾಕಿದರು.
ವಿದ್ಯುತ್ ಕಡಿತ ಇಲ್ಲ: ಮುಂಗಾರು-ಹಿಂಗಾರು ಕೈಕೊಟ್ಟಿದ್ದು ಜಲಾಶಯಗಳಲ್ಲಿ ನೀರಿನ ಕೊರತೆಯ ಮಧ್ಯೆಯೂ ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಆಗುತ್ತಿದೆ ಎಂದ ಅವರು, ಎಪ್ರಿಲ್, ಮೇ ಹಾಗೂ ಜೂನ್ ತಿಂಗಳನಲ್ಲಿ ರೈತರು, ಕೈಗಾರಿಕೆಗಳಿಗೆ ಹಾಗೂ ಜನ ಸಾಮಾನ್ಯರಿಗೆ ತೊಂದರೆ ಆಗದಂತೆ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಸಿದ್ಧರಾಮಯ್ಯ ಅಭಯ ನೀಡಿದರು.
ನಾನು ಅರಸು ಅಲ್ಲ
‘ನಾನು ದೇವರಾಜ ಅರಸು ಖಂಡಿತ ಅಲ್ಲ, ನಾನು ಸಿದ್ಧರಾಮಯ್ಯ. ಅವರ ಹಾದಿಯಲ್ಲಿ ಸಾಮಾಜಿಕ ಕಳಕಳಿಯಿಂದ ನಡೆಯುವ ಪ್ರಯತ್ನ ಮಾಡುವೆ. ಚಾಮರಾಜನಗರ ಜಿಲ್ಲೆಗೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೇವೆಂಬ ವೌಢ್ಯಕ್ಕೆ ಸಡ್ಡು ಹೊಡೆದು ಅಲ್ಲಿಗೆ ಹೋಗಿ ಬಂದೆ. ಇನ್ನೂ ಅಧಿಕಾರದಲ್ಲಿದ್ದೇನೆ.’
ಸಿದ್ದರಾಮಯ್ಯ, ಮುಖ್ಯಮಂತ್ರಿ