×
Ad

ಸುದ್ದಿ ವಾಹಿನಿಗಳು ನ್ಯಾಯಾಲಯದಂತೆ ಕಾರ್ಯನಿರ್ವಹಿಸುವುದು ಅಪಾಯಕಾರಿ: ಸಿದ್ದರಾಮಯ್ಯ

Update: 2016-03-06 22:33 IST

ಬೆಂಗಳೂರು, ಮಾ. 6: ಕೆಲ ಖಾಸಗಿ ಸುದ್ದಿವಾಹಿನಿಗಳಲ್ಲಿ ಸುದ್ಧಿ ನಿರೂಪಕರೇ ನ್ಯಾಯವಾದಿಗಳಂತೆ ವಾದ ಮಂಡಿಸಿ, ಅಂತಿಮವಾಗಿ ನ್ಯಾಯಮೂರ್ತಿಗಳಂತೆ ನ್ಯಾಯವನ್ನುನೀಡುವುದು ಅಪಾಯಕಾರಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಬೆಂಗಳೂರು ಟಿವಿ ಜರ್ನಲಿಸ್ಟ್  ಅಸೋಸಿಯೇಶನ್ ಉದ್ಘಾಟನಾ ಸಮಾರಂಭ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನ ಸಾಮಾನ್ಯರ ಅಭಿವೃದ್ಧಿಗಾಗಿ ಮಾಧ್ಯಮಗಳು ಶ್ರಮಿಸಬೇಕಾದ ಅಗತ್ಯವಿದೆ ಎಂದು ಸಲಹೆ ಮಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರವಿದ್ದು, ಉನ್ನತ ವೌಲ್ಯ ಗಳನ್ನು ಸ್ಥಾಪಿಸಲು ಮುಂದಾಗಬೇಕು. ಯಾವುದೇ ಕ್ಷೇತ್ರದಲ್ಲಿ ದುಡಿಯುತ್ತಿರಲಿ, ಅವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಇದರಿಂದ ಸಮಾಜಕ್ಕೆ ಅನುಕೂಲವಾಗುತ್ತದೆ ಎಂದು ಸಿದ್ಧರಾಮಯ್ಯ ಹೇಳಿದರು.
ರಾಜ್ಯದಲ್ಲಿ ಮೊಟ್ಟಮೊದಲನೆ ಬಾರಿಗೆ ಟಿವಿ ಜರ್ನಲಿಸ್ಟ್ ಸಂಘಟನೆ ಹುಟ್ಟಿಕೊಂಡಿದ್ದು, ಎಲ್ಲರ ವಿಶ್ವಾಸವನ್ನುಗಳಿಸುವ ರೀತಿಯಲ್ಲಿ ಹೊಸ ಚಿಂತನೆ ಮಾಡಬೇಕೆಂದ ಸಿದ್ದರಾಮಯ್ಯ, ಜನತೆಯನ್ನು ಅಭಿವೃದ್ಧಿ ದಿಕ್ಕಿನಲ್ಲಿ ಕೊಂಡೊಯ್ಯಲು ಸುದ್ಧಿ ವಾಹಿನಿಗಳು ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಮಾಧ್ಯಮಗಳಲ್ಲಿ ಬರುವ ವಿಚಾರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ರಾಜಕಾರಣಿಗಳೂ ಮಾಧ್ಯಮಗಳಿಂದ ಸಂಬಂಧ ಪಟ್ಟ ವಿಷಯದ ಬಗ್ಗೆ ಮಾಹಿತಿ ಪಡೆದ ನಂತರವೇ ವೌಲ್ಯಮಾಪನ ಮಾಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಎಷ್ಟು ಕೆಲಸ ಮಾಡಿದ್ದೇವೆ, ಅದರಲ್ಲಿನ ಒಳ್ಳೆಯ ಅಂಶಗಳೆಷ್ಟೆಂದು ಲೆಕ್ಕ ಹಾಕಿದರೆ, ಸಮಾಜದ ಬಗ್ಗೆ ಚಿಂತನೆ ಮಾಡಲು ಸಾಧ್ಯ ಎಂದು ಹೇಳಿದರು.
ಹಿರಿಯ ಪತ್ರಕರ್ತ ಹಾಗೂ ಇಂಡಿಯಾ ಟುಡೆ ಗ್ರೂಪ್‌ನ ಸಮಾಲೋಚನ ಸಂಪಾದಕ ರಾಜ್‌ದೀಪ್ ಸರ್ ದೇಸಾಯಿ ಮಾತನಾಡಿ, ಕಾರ್ಪೋರೇಟ್ ಮತ್ತು ಟಿಆರ್‌ಪಿ ಪೈಪೋಟಿ ಕಾರಣದಿಂದ ಟಿವಿ ಮಾಧ್ಯಮಗಳ ವೌಲ್ಯಗಳು ಕಡಿಮೆಯಾಗುತ್ತಿದೆ. ಆದರೆ, ಕೆಲ ಮಾಧ್ಯಮಗಳು ಇಂದಿಗೂ ಸಾರ್ವಜನಿಕರ ಹಿತಾಸಕ್ತಿಗಾಗಿ ದುಡಿಯುತ್ತಿವೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಸಚಿವ ಆರ್.ರೋಷನ್ ಬೇಗ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್, ಹಿರಿಯ ಪತ್ರಕರ್ತ ಹಮೀದ್ ಪಾಳ್ಯ, ಬಿಡಿಜೆಎ ಅಧ್ಯಕ್ಷ ಬಿ.ಎಸ್.ಸತ್ಯನಾರಾಯಣ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News