ಚಿತ್ರದುರ್ಗ: ಮುರುಘಾ ಮಠದಲ್ಲಿ ಶರಣ ಸಂಗಮ ಕಾರ್ಯಕ್ರಮ

Update: 2016-03-06 17:12 GMT

ಚಿತ್ರದುರ್ಗ, ಮಾ. 6: ಇಸ್ಲಾಂ ಎಂಬ ಪದದ ಅರ್ಥ ಶಾಂತಿ. ಇದನ್ನು ಅರ್ಥ ಮಾಡಿಕೊಂಡವರು ಯಾರೂ ಅಶಾಂತಿಗೆ ಕೈಹಾಕುವುದಿಲ್ಲ ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರವಿವಾರ ಬಸವಕೇಂದ್ರ ಮುರುಘಾಮಠ ಮತ್ತು ಎಸ್‌ಜೆಎಂ ಕಲಾ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಲಯ ಸಹಯೋಗದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಮಾನವ ಅಹಂಕಾರವನ್ನು ಕಳೆದುಕೊಳ್ಳಬೇಕಾದರೆ ಅಷ್ಟ ಮದಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. 21ನೆ ಶತಮಾನದಲ್ಲಿ ಚರ್ಚೆ ಆಗುತ್ತಿರುವ ಅಂಶವೆಂದರೆ ಸರ್ವೋದಯ. ಇದು ಸಂಘಟನೆಯ ಹೆಸರಲ್ಲ. ದಯಾನಂದ ಸರಸ್ವತಿಯವರು ಮೊದಲಿಗೆ ಸರ್ವೋದಯದತ್ತ ನಮ್ಮ ಹೆಜ್ಜೆ ಎಂದಿದ್ದರು. ಸಮ ಸಮಾಜ ಎಂಬುದು ಸರ್ವೋದಯದ ಇನ್ನೊಂದು ಅರ್ಥ. ಎಲ್ಲ್ಲ ಜಾತಿ ಸಮುದಾಯದವರು ಮುಂದೆ ಬರಬೇಕು. ಏಸು, ಪ್ರವಾದಿ ಮುಹಮ್ಮದ್, ಬಸವ, ಬುದ್ಧ ಸಮ ಸಮಾಜದ ನಿರ್ಮಾತೃಗಳು. ಸ್ವಾಮಿ ವಿವೇಕಾನಂದರು ಇಂತಹ ಕೆಲಸಕ್ಕೆ ಕೈ ಹಾಕಿದವರು. ಅವರು ನನ್ನ ದೇವರು ಬಡವರ ಗುಡಿಸಲಿನಲ್ಲಿದ್ದಾನೆ ಎನ್ನುತ್ತಾರೆ. ಅಂತ್ಯಜನು ಉದ್ಧಾರ ಆಗಬೇಕೆಂಬುದು ಗಾಂಧೀಜಿ ಕನಸಾಗಿತ್ತು ಎಂದು ಮುರುಘಾ ಶರಣರು ತಿಳಿಸಿದರು.
 ಕರ್ನಾಟಕ ಜಮಾತೆ-ಇ-ಇಸ್ಲಾಮಿ ಹಿಂದ್‌ನ ರಾಜ್ಯ ಸಲಹಾ ಸಮಿತಿ ಸದಸ್ಯ ಅಕ್ಬರ್ ಅಲಿ ಮಾತನಾಡಿ, 1400 ವರ್ಷಗಳ ಹಿಂದೆ ಹೆಣ್ಣುಮಕ್ಕಳನ್ನು ಜೀವಂತ ಸಮಾಧಿ ಮಾಡುತ್ತಿದ್ದರು. ಆದರೆ, ಇಂದು ಹೆಣ್ಣು ಹುಟ್ಟುವ ಮೊದಲೇ ಸಾಯಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಕಾರಣ ಹೆಣ್ಣು ಹುಟ್ಟಿದರೆ ವಿದ್ಯಾಭ್ಯಾಸ, ಮದುವೆ ಹೀಗೆ ಅನೇಕ ಖರ್ಚುಗಳು ಬರುತ್ತವೆ ಎಂದು ಕೆಲವರು ಯೋಚಿಸುತ್ತಾರೆ ಎಂದರು.
 ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಮಾತನಾಡಿ, ಭಾರತವು ಹಿಂದುಳಿಯಲು ಬಡತನ ಕಾರಣವಲ್ಲ. ಇದಕ್ಕೆ ವಿಚಾರಹೀನತೆಯೇ ಕಾರಣ. ಇಂದಿನ ದಿನಮಾನಗಳಲ್ಲಿ ವಿಚಾರ ಎಂದರೆ ಹಿಂದೆ ಉಳಿಯುವವರೇ ಹೆಚ್ಚು. ಆದರೆ ಶ್ರೀಗಳು ವಿಚಾರಗಳನ್ನು ಜನಸಾಮಾನ್ಯರಿಗೆ ಮುಟ್ಟುವಂತೆ ಮಾಡಿದ್ದಾರೆ ಎಂದರು.

ಮುಸ್ಟೂರು ಮಠದ ಶ್ರೀಗಳು, ಎಸ್‌ಜೆಎಂಕಾಲೇಜಿನ ಪ್ರಾಂಶುಪಾಲೆ ಗಂಗಾಂಬಿಕೆ ಮುಂತಾದ ವರು ಉಪಸ್ಥಿತರಿದ್ದರು. ಇದೇ ವೇಳೆ ಹರೀಶ್ ಹರ್ಸೂರ್ ಮತ್ತು ಮುಸ್ಲಿಂ ಯಾದಗಿರ್ ರಚಿಸಿದ ಬಸವತತ್ವ-ಇಸ್ಲಾಂ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News