ವಿವಿಗಳಲ್ಲಿ ಸಂವಿಧಾನಕ್ಕೆ ಸಂಬಂಧಪಟ್ಟ ಉಪನ್ಯಾಸ ಆಯೋಜಿಸಿ: ನ್ಯಾ.ಗೋಪಾಲಗೌಡ
ಬೆಂಗಳೂರು, ಮಾ.6: ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ವಿಶ್ವ ವಿದ್ಯಾನಿಲಯಗಳು ಸಂವಿಧಾನದ ಬಗೆಗಿನ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದ್ದಾರೆ. ರವಿವಾರ ಬೆಂವಿವಿಯ ಜ್ಞಾನಭಾರತಿ ಆವರಣದ ಪ್ರೊ.ಕೆ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಬೆಂವಿವಿ ಹಾಗೂ ಸ್ನಾತಕೋತ್ತರ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಭಾಗ ಜಂಟಿಯಾಗಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಭಾರತದ ಸಂವಿಧಾನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಂದಿದೆ. ಈ ಸಂವಿಧಾನದ ಆಶಯ ಬಗೆಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲ ವಿವಿಗಳಲ್ಲಿ ಉಪನ್ಯಾಸಗಳನ್ನು ಆಯೋಜಿಸಿದರೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೂಡುತ್ತದೆ ಎಂದು ಹೇಳಿದರು.
ಭಾರತಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದ್ದರೂ ಆರ್ಥಿಕ ಸಮಾನತೆ, ಶೈಕ್ಷಣಿಕ ಸಮಾನತೆ, ಸಾಮಾಜಿಕ ಸಮಾನತೆ ಸೇರಿ ಇನ್ನಿತರ ಸಮಾನತೆಗಳು ಎಲ್ಲ ವರ್ಗದವರಿಗೂ ಸಿಕ್ಕಿರಲಿಲ್ಲ. ಆದರೆ, ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ ಮೇಲೆ ದಲಿತರು, ಹಿಂದುಳಿದವರು ಹಾಗೂ ಬಡವರಿಗೆ ಸಾಮಾಜಿಕ ನ್ಯಾಯ ಲಭಿಸಿತು ಎಂದು ಹೇಳಿದರು. ಸರಕಾರಿ ಹುದ್ದೆಗಳು ಧ್ವನಿ ಇಲ್ಲದವರಿಗೂ ಸಿಗಲಿಯೆಂಬ ಉದ್ದೇಶದಿಂದ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸುವಾಗ ಮೀಸಲಾತಿಗೆ ಆದ್ಯತೆಯನ್ನು ನೀಡಿದರು. ಇದರಿಂದ, ಧ್ವನಿ ಇಲ್ಲದವರಿಂದು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಜನ ಸಾಮಾನ್ಯರಿಗೂ ಸಂವಿಧಾನದ ಆಶಯಗಳ ಬಗ್ಗೆ ತಿಳಿಸಬೇಕಾಗಿದ್ದು, ಇದರಿಂದ, ಜನಸಾಮಾನ್ಯರೂ ಸಂವಿಧಾನದಿಂದಾಗುವ ಲಾಭಗಳನ್ನು ಪಡೆಯುತ್ತಾರೆಂದು ಹೇಳಿದರು. ಅಲ್ಲದೆ, ಅಂಬೇಡ್ಕರ್ ಅವರ ಆದರ್ಶ ಹಾಗೂ ಸಂವಿಧಾನದ ರಚನೆಯಿಂದಾಗಿ ನಮ್ಮ ಮನಸ್ಸಿನಲ್ಲಿ ನೂರಾರು ವರ್ಷಗಳ ಕಾಲ ಉಳಿಯುತ್ತಾರೆ ಅವರು ಎಂದು ನುಡಿದರು. ಬೆಂಗಳೂರು ವಿವಿಯಲ್ಲಿ ಹನುಮಂತರಾಯಪ್ಪ ಅವರು ಡೀನ್ ಆಗಿ ಕೆಲಸ ಮಾಡಿದ್ದಾರೆ. ಅವರು ವಿವಿಯ ಕುಲಪತಿಗಳಾಗುತ್ತಾರೆಯೆಂಬ ಆಶಾಭಾವನೆಯನ್ನಿಟ್ಟುಕೊಂಡಿದ್ದೆವು. ಆದರೆ, ಸರಕಾರಗಳು ಅರ್ಹತೆಯಿದ್ದರೂ ಅವರನ್ನು ವಿವಿಯ ಕುಲಪತಿಯನ್ನಾಗಿ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬೆಂವಿವಿ ಕುಲಪತಿ ಪ್ರೊ.ಬಿ.ತಿಮ್ಮೇಗೌಡ, ಡಾ.ಅಂಬೇಡ್ಕರ್ ಅವರು ಎಲ್ಲ ವರ್ಗದವರಿಗೂ ನಾಯಕರಾಗಿದ್ದು, ಅವರು ಬರೀ ದೇಶಕ್ಕೆ ಸ್ವಾತಂತ್ರ ಸಿಕ್ಕರೆ ಸಾಲದು, ಈ ದೇಶದಲ್ಲಿ ಇರುವ ಎಲ್ಲರಿಗೂ ಸ್ವಾತಂತ್ರ ಹಾಗೂ ಸಮಾನತೆ ಸಿಗಬೇಕೆಂಬ ಆಸೆಯನ್ನಿಟ್ಟುಕೊಂಡಿದ್ದರು ಎಂದು ಹೇಳಿದರು. ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಮೇಲ್ವಿಚಾರಕ ಡಾ.ಸಿದ್ದಲಿಂಗಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿಯ ರಿಜಿಸ್ಟ್ರಾರ್ ಪ್ರೊ.ಕೆ.ಕೆ.ಸೀತಮ್ಮ, ಕಾನೂನು ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ವಿ.ಸುದೇಶ್, ಕಾನೂನು ವಿಭಾಗದ ಪ್ರಾಂಶುಪಾಲ ಹಾಗೂ ಡೀನ್ ಡಾ.ಸುರೇಶ್ ವಿ. ನಾಡಗೌಡರ್ ಮತ್ತಿತರರು ಉಪಸ್ಥಿತರಿದ್ದರು.