ಲಂಕೇಶ್ 81 ಕಾರ್ಯಕ್ರಮಕ್ಕೆ ಶೆಹ್ಲಾ ರಶೀದ್ !
ಬೆಂಗಳೂರು, ಮಾ.7: ದೇಶಾದ್ಯಂತ ಸಂಚಲನ ಮೂಡಿಸಿರುವ ಜೆಎನ್ ವಿವಿಯ ವಿದ್ಯಾರ್ಥಿ ನಾಯಕರು ಈಗ ಬೆಂಗಳೂರಿಗೆ ಬರುತ್ತಿದ್ದಾರೆ. ವಿವಿ ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್ ಅವರನ್ನು ದೆಹಲಿ ಪೊಲೀಸರು ದೇಶದ್ರೋಹದ ಆರೋಪ ಹೊರಿಸಿ ಬಂಧಿಸಿದಾಗ ಇಡೀ ಹೋರಾಟದ ನೇತೃತ್ವ ವಹಿಸಿದ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಮಾರ್ಚ್ 12ರಂದು ಬೆಂಗಳೂರಿಗೆ ಬರುತ್ತಿದ್ದಾರೆ. ಅಂದು ನಗರದಲ್ಲಿ ನಡೆಯುವ ‘ಲಂಕೇಶ್ 81’ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಭಾಗವಹಿಸುತ್ತಾರೆ ಎಂದು ಗೌರಿ ಲಂಕೇಶ್ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ತಮ್ಮ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ. ಜೊತೆಗೆ ವಿವಿಯ ವಿದ್ಯಾರ್ಥಿ ಸಂಘದ ಇತರ ನಾಯಕರಾಗ ಅನಂತ್ ಹಾಗು ಮೋಹಿತ್ ಕೂಡ ಬರುತ್ತಿದ್ದಾರೆ ಎಂದು ಗೌರಿ ಲಂಕೇಶ್ ಖಚಿತಪಡಿಸಿದ್ದಾರೆ.
‘ಲಂಕೇಶ್ 81’ ಕಾರ್ಯಕ್ರಮಕ್ಕೆ ಸದ್ಯ ದೇಶದ ಅತ್ಯಂತ ಯುವ ನಾಯಕನಾಗಿ ಮಿಂಚುತ್ತಿರುವ ಕನ್ಹಯ್ಯ ಕುಮಾರ್ ಅವರೇ ಬರವುದು ಬಹುತೇಖ ಖಚಿತವಾಗಿತ್ತು. ಆದರೆ ಅವರಿಗೆ ಕೆಲವು ದುಷ್ಟ ಶಕ್ತಿಗಳು ಜೀವ ಬೆದರಿಕೆ ಹಾಕಿರುವುದರಿಂದ ಹಾಗು ಕೇಂದ್ರ ಸರಕಾರ ಅವರಿಗೆ ಭದ್ರತೆ ಒದಗಿಸುವ ಕುರಿತು ಸ್ಪಷ್ಟವಾಗಿ ಏನನ್ನೂ ಹೇಳದೆ ಇರುವುದರಿಂದ ಸದ್ಯ ಅವರು ದಿಲ್ಲಿಯಿಂದ ಅಥವಾ ವಿವಿಯಿಂದ ಹೊರಗೆ ಪ್ರಯಾಣ ಮಾಡುತ್ತಿಲ್ಲ ಎಂದು ಗೌರಿ ಅವರಿಗೆ ಮಾಹಿತಿ ಬಂದಿದೆ.
ಕನ್ಹಯ್ಯ ಬಂಧನದ ಬಳಿಕ ಪರಿಣಾಮಕಾರಿ ಹೋರಾಟ ಸಂಘಟಿಸಿ ಇಡೀ ದೇಶದ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿರುವ ಜೆಎನ್ ವಿವಿ ವಿದ್ಯಾರ್ಥಿ ನಾಯಕರಿಗೆ ಈಗ ದೇಶದ ಎಲ್ಲ ಕಡೆಗಳಿಂದ ಕಾರ್ಯಕ್ರಮಗಳಿಗೆ ಆಹ್ವಾನದ ಮಹಾಪೂರವೇ ಹರಿದು ಬರುತ್ತಿದೆ.
ಮಾರ್ಚ್ 12ರಂದು ‘ಲಂಕೇಶ್ 81’ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳುತ್ತಿರುವ ಪುಸ್ತಕಗಳ ಮುಖಪುಟಗಳು. ಅಂದಹಾಗೆ, ಆ ಕಾರ್ಯಕ್ರಮಕ್ಕೆ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷೆ ಶೆಹ್ಲಾ ರಶೀದ್ ದೆಹಲಿಯಿಂದ ಬರುತ್ತಿದ್ದಾರೆ.