ಸ್ವಉದ್ಯೋಗಿ ಮಹಿಳೆಯರಿಗೆ ಬಡ್ಡಿರಹಿತ ಸಾಲ: ದೇಶಪಾಂಡೆ
ಬೆಂಗಳೂರು, ಮಾ. 8: ಗುಡಿ ಕೈಗಾರಿಕೆ, ಕರಕುಶಲ ಕೈಗಾರಿಕೆ ಮೊದಲಾದ ಸಣ್ಣ ಉದ್ದಿಮೆಗಳನ್ನು ಆರಂಭಿಸಲು ಬಡ್ಡಿರಹಿತ ಸಾಲ ಸೌಲಭ್ಯ ಸೇರಿದಂತೆ ಎಲ್ಲ ರೀತಿಯ ಬೆಂಬಲ ನೀಡಲು ಸರಕಾರ ಸಿದ್ಧವಿದೆ, ಮಹಿಳೆಯರು ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕೆಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಮಂಗಳವಾರ ಅವೇಕ್ ಸಂಸ್ಥೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಈಗಾಗಲೇ ಮಹಿಳೆಯರು ಕೈಗಾರಿಕಾ ಕ್ಷೇತ್ರದಲ್ಲಿಯೂ ಎತ್ತರದ ಸಾಧನೆ ಮಾಡಿದ್ದಾರೆ. ಸ್ವಂತ ಉದ್ದಿಮೆಗಳನ್ನು ಆರಂಭಿಸಿ ಪುರುಷರಿಗೆ ಸರಿಸಮನಾಗಿ ನಿಂತಿದ್ದಾರೆ. ರಾಜ್ಯ ಸರಕಾರವು ಉದ್ದಿಮೆ ಆರಂಭಿಸಲು ಸೌಲಭ್ಯಗಳನ್ನು ಕಲ್ಪಿಸಿವೆ. ಅಂತೆಯೇ ಗ್ರಾಮೀಣ ಪ್ರದೇಶಗಳಲ್ಲೂ ಮಹಿಳೆಯರು ಉದ್ದಿಮೆಗಳನ್ನು ಆರಂಭಿಸಬೇಕು. ಇದರಿಂದ ಆ ಭಾಗದ ಜನ ಉದ್ಯೋಗ ಅರಿಸಿ ನಗರಗಳಿಗೆ ಬರುವುದು ತಪ್ಪುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಹಿಳೆಯರ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ಆರಂಭಿಸಿವೆ ಎಂದರು.
ದೇಶದ ಪ್ರಗತಿಯ ಪ್ರಕ್ರಿಯೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದು, ಮಹಿಳೆಯರಿಗೆ ನಾಗರಿಕ ಸಮಾಜ ಗೌರವ ನೀಡಬೇಕು. ಮಹಿಳೆ ಅಡುಗೆ ಮನೆಗೆ ಸೀಮಿತ ಎನ್ನುವ ಕಾಲ ದೂರವಾಗಿದೆ. 21ನೆ ಶತಮಾನ ಹಲವು ಬದಲಾವಣೆಗಳಿಗೆ ಕಾರಣವಾಗಿದೆ. ದೇಶ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳಲ್ಲಿ ಬಹಳಷ್ಟು ಅಭಿವೃದ್ಧಿ ಸಾಧಿಸಿದೆ. ಈ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸಿದ್ದಾರೆ. ಅಂತೆಯೇ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಶ್ಲಾಘನೀಯ ಸಾಧನೆ ಮಾಡಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯರ ಸಹಕಾರವಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಂ.ವೆಂಕಟಾಚಲಯ್ಯ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಾ ಪ್ರಭಾ, ಐ ಬ್ರಾಂಡ್ ಬೆವರೇಜ್ ಅಧ್ಯಕ್ಷೆ ಲೀಸಾ ಸಾರೋ, ಅವೇಕ್ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಬಾಲಕೃಷ್ಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ವಿಶ್ವ ಮಹಿಳಾ ದಿನದ ಅಂಗವಾಗಿ ಸಾಧಕಿಯರಿಗೆ ಸನ್ಮಾನ
ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಾ ಪ್ರಭಾ, ಇಸ್ರೋ ವಿಜ್ಞಾನಿ ಟಿ.ಕೆ.ಅನುರಾಧಾ, ನಟಿ ಲಕ್ಷ್ಮೀ ಗೋಪಾಲಸ್ವಾಮಿ, ಕಾಫಿ ಗುಣಮಟ್ಟ ನಿಯಂತ್ರಣ ತಜ್ಞೆ ಸೊನಾಲಿ ಮೆನನ್, ಸಾವಯವ ಕೃಷಿ ಮಹಿಳೆ ಸಂಗೀತಾ ಶರ್ಮಾ, ಫೀಡ್ ಯುವರ್ ನೈಬರ್ ಸಂಸ್ಥೆ ಸಂಸ್ಥಾಪಕಿ ಮಹಿತಾ ಫೆರ್ನಾಂಡಿಸ್, ಮಾಜಿ ಕ್ರೀಡಾಪಟು ನಂದಿನಿ ಬಸಪ್ಪ ಸನ್ಮಾನಿತರು.