ಕಿರಂ ನಿಜವಾದ ಶರಣ: ಡಾ.ನಟರಾಜ್ ಹುಳಿಯಾರ್
ಬೆಂಗಳೂರು, ಮಾ. 8: ಯಾರಿಗೆ ಬೇಕಾದರೂ ಜ್ಞಾನವನ್ನು ಹಂಚಬಹುದು, ಯಾರು ಬೇಕಾದರೂ ಜ್ಞಾನವನ್ನು ಪಡೆಯಬಹುದು ಎಂಬ ನಂಬಿಕೆಯ ಕಿರಂ ನಾಗರಾಜ್ ನಿಜವಾದ ಶರಣ. ಅವರು ಕಲಿತ, ಹಂಚಿದ, ಆಲೋಚನೆಯ ಕ್ರಮವೇ ಹೇಳುವ ಕ್ರಮವಾಗಿತ್ತು ಎಂದು ಚಿಂತಕ ಡಾ.ನಟರಾಜ್ ಹುಳಿಯಾರ್ ಅಭಿಪ್ರಾಯಿಸಿದ್ದಾರೆ. ಕಾವ್ಯ ಮಂಡಲ ಮತ್ತು ಪ್ರೆಸ್‌ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಕಿರಂ ನೆನಪಿನ ಕಾವ್ಯ ಶಿವರಾತ್ರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು, ಕಿರಂ ನಾಗರಾಜರು ಹೆಚ್ಚಿಗೆ ಬರೆಯಲಿಲ್ಲ ಎಂಬುದು ಮುಖ್ಯವಲ್ಲ. ಅವರು ಆಲೋಚಿಸುವ ಕ್ರಮವೇ ಹೇಳುವ ಕ್ರಮವಾಗಿತ್ತು. ಅವರ ಬಳಿ ಬಂದವರಿಗೆ ಇವನಾರವ ಇವನಾರವ ಎಂಬುದ ಎಣಿಸದೆ ಇವ ನಮ್ಮವ ಇವ ನಮ್ಮವ ಎಂದು ಬಂದವರೆಲ್ಲರಿಗೂ ಕಲಿತ ಜ್ಞಾನವನ್ನು ಹಂಚಿದ ನಿಜವಾದ ಶರಣ ಎಂದು ಹೇಳಿದರು. ಸಾಮಾನ್ಯವಾಗಿ ನಿರ್ದೇಶಕರಿಗೆ, ಲೇಖಕರಿಗೆ, ಪತ್ರಕರ್ತರಿಗೆ, ನಾಟಕಕಾರರಿಗೆ ತಮ್ಮದೇ ಆದ ಒಂದು ಐಡಿಯಾ ಇರುತ್ತದೆ. ಅಲ್ಲಿ ಸ್ವಾರ್ಥವಿರುತ್ತದೆ. ಅವರಾರು ತಮ್ಮ ಐಡಿಯಾವನ್ನ್ನು ಯಾರಿಗೂ ಹೇಳಿಕೊಡುವುದಿಲ್ಲ. ಹಾಗೆಯೇ ಎಲ್ಲರನ್ನೂ ಎಲ್ಲರೂ ಸಹಿಸಿಕೊಳ್ಳುವುದಿಲ್ಲ. ಆದರೆ ಕಿರಂ ಮಾತ್ರ ತಮ್ಮ ಜ್ಞಾನವನ್ನು ಹಲವರಿಗೆ ಹಂಚಿದ ಸಣ್ಣತನಗಳಿಲ್ಲದ ಸ್ವಾರ್ಥವಿಲ್ಲದ ಅಪ್ಪಟ ಮನುಷ್ಯ. ತಮ್ಮ ತಿಳಿವಿಗೆ ಬಂದದ್ದನ್ನು ಬಂದವರಿಗೆಲ್ಲ ನೀಡಿದ ನಿಜವಾದ ಅರ್ಥದ ಜಂಗಮ ಎಂದರು.
ಒಂದು ಸಲ ಹೀಗೆಯೇ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ, ಕವಿ ನಿಸಾರ್ ಅಹ್ಮದ್ ಅವರ ಕವನದ ಸಾಲುಗಳನ್ನು ಚಿತ್ರನಿರ್ದೇಶಕನೊಬ್ಬ ಕದ್ದು, ಕುರಿಗಳು ಸಾರ್ ಕುರಿಗಳು ಎಂಬ ಚಿತ್ರ ಮಾಡಿದ್ದ. ಆ ಪೋಸ್ಟರ್ ನೋಡಿದ ಕಿರಂ, ಯಾವನ್ರಿ ಅವನು ಕವಿ ರೂಪಕಗಳನ್ನು ಹಾಳು ಮಾಡುತ್ತಿದ್ದಾನೆ, ಒಂದು ರೂಪಕವನ್ನು ಸೃಷ್ಟಿಸಲು ಯೋಗ್ಯತೆ ಇಲ್ಲದಿದ್ದರೆ ಕವಿಯ ರೂಪಕವನ್ನು ಕದ್ದು ವಿಕೃತಗೊಳಿಸಲು ಅವರಿಗೇನ್ರಿ ಹಕ್ಕಿದೆ ಎಂದು ಸಿಟ್ಟಾಗಿದ್ದರು. ಅದೇ ರೀತಿ ಜಿ.ಎಸ್.ಶಿವರುದ್ರಪ್ಪನವರ ಎದೆ ತುಂಬಿ ಹಾಡುವೆನು ಎಂಬ ಕವನವನ್ನು ಕದ್ದು ಎದೆ ತುಂಬಿ ಹಾಡಿದೆನು ಎಂದು ಯಾವುದೋ ಒಂದು ಟಿವಿ ಕಾರ್ಯಕ್ರಮವನ್ನಾಗಿಸಿದಾಗಲೂ ಇದೇ ರೀತಿ ಸಿಟ್ಟಾಗಿದ್ದರು. ಈ ರೀತಿಯಾಗಿ ಕಿರಂ ಸಾಹಿತ್ಯ ಮತ್ತು ಕವಿಯ ರೂಪಕಗಳ ರಕ್ಷಣೆಯ ಕೆಲಸವನ್ನು ತಮ್ಮ ಜೀವನದುದ್ದಕ್ಕೂ ಮಾಡಿದರು ಎಂದರು.
ಪ್ರೆಸ್ ಕ್ಲಬ್‌ನ ಲಂಕೇಶ್ ರಂಗಮಂಚದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಿರಂಗೆ ಇಷ್ಟವಾಗುವ ಮಂಟೇಸ್ವಾಮಿ ಮಾದಪ್ಪನ ಮಹಾಕಾವ್ಯಗಳು ಮತ್ತು ಶರೀಫರ ಗೀತೆಗಳನ್ನು ಅಹೋರಾತ್ರಿ ಹಾಡಿ ರಂಜಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಉದಯ್ ಗರುಡಾಚಾರ್, ಕವಿ ಸಿದ್ದಲಿಂಗಯ್ಯ, ಕಾವ್ಯ ಮಂಡಲದ ಎಲ್.ಎನ್.ಮುಕುಂದರಾಜ್, ಟಿ.ವೆಂಕಟೇಶಮೂರ್ತಿ, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಉಪನ್ಯಾಸಕ ಜಯಶಂಕರ್ ಹಲಗೂರು ಉಪಸ್ಥಿತರಿದ್ದರು.