×
Ad

ಹುತಾತ್ಮ ಯೋಧರ ಕುಟುಂಬಗಳಿಗೆ ಉಚಿತ ಕೆಎಸ್ಸಾರ್ಟಿಸಿ ಬಸ್ ಪಾಸ್

Update: 2016-03-08 23:18 IST

ಬೆಂಗಳೂರು, ಮಾ. 8: ಹುತಾತ್ಮ ಯೋಧರ ಕುಟುಂಬಗಳಿಗೆ ಉಚಿತ ಕೆಎಸ್ಸಾರ್ಟಿಸಿ ಬಸ್ ಪಾಸ್ ವಿತರಿಸುವ ಯೋಜನೆಯನ್ನು ಇದನ್ನು ಹುತಾತ್ಮ ಯೋಧರ ಕುಟುಂಬಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
 
ಮಂಗಳವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನಗರದಲ್ಲಿರುವ ತನ್ನ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ ಸಮಾರಂಭದಲ್ಲಿ ಇತ್ತೀಚೆಗೆ ಹುತಾತ್ಮ ಯೋಧರಾದ ಹನುಮಂತಪ್ಪ ಕೊಪ್ಪದ ಅವರ ಪತ್ನಿ ಮಹಾದೇವಿ ಕೊಪ್ಪದ ಹಾಗೂ ನಾಗೇಶ್ ಅವರ ಪತ್ನಿ ಆಶಾ ಅವರಿಗೆ ಸಚಿವರು ವೈಯಕ್ತಿಕವಾಗಿ ತಲಾ 50 ಸಾವಿರ ನಗದು ಹಾಗೂ ಸಂಸ್ಥೆ ವತಿಯಿಂದ ಉಚಿತ ಬಸ್ ಪಾಸ್ ಮತ್ತು ಗೌರವ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು. ಉಚಿತ ಬಸ್ ಪಾಸ್ ವಿತರಿಸುವ ಯೋಜನೆ ಈಗಾಗಲೇ ಜಾರಿಯಲ್ಲಿದೆ. ಆದರೆ ಹೆಚ್ಚಿನ ಜನರು ಇದನ್ನು ಪಡೆಯುತ್ತಿಲ್ಲ. ಹೀಗಾಗಿ ಈ ಯೋಜನೆಯನ್ನು ಅರ್ಹರೆಲ್ಲರೂ ಪಡೆಯಬೇಕು ಎಂಬುದು ನಮ್ಮ ಉದ್ದೇಶ. ಹುತಾತ್ಮ ಯೋಧರ ಅವಲಂಬಿತರು ಅಂದರೆ ಪತ್ನಿ, ಮಕ್ಕಳು ಹಾಗೂ ತಂದೆ-ತಾಯಿಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಈ ಯೋಜನೆಯನ್ನು ಕಟ್ಟುನಿಟ್ಟಾಗಿ ಎಂದರು.
ಅತಿ ಹೆಚ್ಚು ಮಹಿಳಾ ಸಿಬ್ಬಂದಿಯನ್ನು ಹೊಂದಿರುವ ಸಂಸ್ಥೆ ಸಾರಿಗೆ ಸಂಸ್ಥೆಯಾಗಿದೆ. ಮಹಿಳಾ ನೌಕರರಿಗೆ ರಾತ್ರಿಪಾಳಿ ಹಾಕುವುದಿಲ್ಲ. ಅವರಿಗೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮುಂದೆಯೂ ಅದೇ ನಿಟ್ಟಿನಲ್ಲಿ ಸಾಗಲಿದೆ ಎಂದು ತಿಳಿಸಿದರು.
ಕೆಎಸ್ಸಾರ್ಟಿಸಿ ಎಂಡಿ ರಾಜೇಂದರ್‌ಕುಮಾರ್ ಕಠಾರಿಯಾ ಮಾತನಾಡಿ, ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಒಟ್ಟಾರೆ 10 ಸಾವಿರ ಮಹಿಳಾ ನೌಕರರಿದ್ದಾರೆ. ಲೈಂಗಿಕ ಶೋಷಣೆ ತಡೆಯಲು ಒಂದು ಸಮಿತಿ ರಚಿಸಲಾಗಿದೆ. ಮಹಿಳೆಯರಿಗೆ ಉದ್ಯೋಗ ಮಾಡಲು ಮುಕ್ತ ವಾತಾವರಣ ಕಲ್ಪಿಸಲಾಗಿದೆ ಎಂದರು.
ಉತ್ತಮ ಸೇವೆಗೈದ 32 ಮಂದಿಗೆ ಸನ್ಮಾನ: ಇದೇ ವೇಳೆ ಉತ್ತಮವಾಗಿ ಸೇವೆ ಸಲ್ಲಿಸಿದ ಸಾರಿಗೆ ಸಂಸ್ಥೆಯ 17 ವಿಭಾಗಗಳಿಂದ ಒಬ್ಬ ಮಹಿಳಾ ನಿರ್ವಾಹಕಿ ಮತ್ತು ಒಬ್ಬ ಮಹಿಳಾ ತಾಂತ್ರಿಕ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಲಾಯಿತು. ಮಹಿಳಾ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಜತೆಗೆ ಮನರಂಜನಾ ಕಾರ್ಯಕ್ರಮಗಳನ್ನೂ ಆಯೋಜಿಸುವ ಮೂಲಕ ಮಹಿಳಾ ಸಿಬ್ಬಂದಿಗೆ ಹಬ್ಬದ ವಾತಾವರಣ ಕಲ್ಪಿಸಲಾಗಿತ್ತು.
ಸಮಾರಂಭದಲ್ಲಿ ದೃಷ್ಟಿ ವಿಶೇಷ ಚೇತನ ಸಾಧಕಿ ಅಶ್ವಿನಿ ಅಂಗಡಿಯವರನ್ನು ಸನ್ಮಾನಿಸಲಾಯಿತು. ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಜಯಮಾಲಾ, ತಾರಾ, ಕೆಎಸ್ಸಾರ್ಟಿಸಿ ಸಂಸ್ಥೆಯ ಉಪಾಧ್ಯಕ್ಷ ಲೋಹಿತ್ ಡಿ. ನಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು.

ಸರಕಾರ ನೀಡಿದ್ದ ಭರವಸೆಯಂತೆ 25 ಲಕ್ಷ ಹಣ ಹಾಗೂ 4 ಎಕರೆ ಭೂಮಿಯನ್ನು ನಮ್ಮ ಕುಟುಂಬಕ್ಕೆ ನೀಡಿದೆ. ಆದರೆ ನಮ್ಮ ಮಗಳ ಶಿಕ್ಷಣದ ಜವಾಬ್ದಾರಿಯ ಬಗ್ಗೆ ಇನ್ನೂ ಯಾವುದೇ ಸವಲತ್ತು ನೀಡಿಲ್ಲ.
-ಮಹಾದೇವಿ ಕೊಪ್ಪದ, ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ ಅವರ ಪತ್ನಿ


25 ಲಕ್ಷ ರೂ. ನೀಡಿದ್ದು ಬಿಟ್ಟರೆ, ಉಳಿದ ಯಾವ ಭರವಸೆ ಯನ್ನೂ ಸರಕಾರ ಈಡೇರಿಸಿಲ್ಲ. ನಿವೇಶನ, ಕುಟುಂಬ ಸದಸ್ಯ ರೊಬ್ಬರಿಗೆ ಸರಕಾರಿ ಕೆಲಸ ಹಾಗೂ ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳುವುದಾಗಿ ಮುಖ್ಯ ಮಂತ್ರಿಗಳು ಆಶ್ವಾಸನೆ ನೀಡಿದ್ದರು. ಆದರೆ, ಇದುವರೆಗೂ ಯಾವ ಭರವಸೆಯನ್ನು ಪೂರ್ಣ ಮಾಡಿಲ್ಲ. ಪತಿಯೊಬ್ಬರೇ ಕುಟುಂಬ ನಿರ್ವಹಿಸುತ್ತಿದ್ದರು. ಇದೀಗ ನಮ್ಮ ಕುಟುಂಬದಲ್ಲಿ ದುಡಿಯುವ ಕೈಯನ್ನು ಕಳೆದುಕೊಂಡಿದ್ದು, ಜೀವನ ನಿರ್ವಹಣೆ ದುಸ್ತರವಾಗಿದೆ.
ಆಶಾ ನಾಗೇಶ್, ಸಿಯಾಚಿನ್‌ನಲ್ಲಿ ಮಡಿದ ಹಾಸನದ ಯೋಧ ನಾಗೇಶ್ ಅವರ ಪತ್ನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News